ದೆಹಲಿ -
	ಭಾರತದ ಒಂದು ರಾಜ್ಯ ಹಾಗೂ ರಾಜಧಾನಿ ಹಾಗೂ ಭಾರತದ ಮೂರನೆ ದೊಡ್ಡ ನಗರ. ರಾಜ್ಯ ಮತ್ತು ರಾಜಧಾನಿ ಎರಡೂ ಸ್ಥಳೀಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ದೆಹಲಿ, ನವದೆಹಲಿ ಮತ್ತು ದೆಹಲಿದಮಡು ಪ್ರದೇಶ ಈ ಮೂರು ಜನಗಣತಿಗೆ ಒಳಪಟ್ಟ ಪ್ರದೇಶಗಳು ಸೇರಿ ದೆಹಲಿ ಮಹಾನಗರ ಪ್ರದೇಶವಾಗಿದೆ. ದೆಹಲಿಯನ್ನು ಪೂರ್ವದಲ್ಲಿ ಉತ್ತರ ಪ್ರದೇಶ, ದಕಿಣ, ಉತ್ತರ ಮತ್ತು ಪಶ್ಚಿಮದಲ್ಲಿ ಹರಿಯಾಣ ರಾಜ್ಯಗಳು ಸುತ್ತುವರೆದಿವೆ. ವಿಶಾಲ ದೆಹಲಿ ಪ್ರದೇಶ ಫರಿದಾಬಾದ್, ಹರಿಯಾಣದ ಗುರುಗಾವ್, ಉತ್ತರ ಪ್ರದೇಶದ ನೊಯಿಡ ಮತ್ತು ಗಾಜಿûಯಾಬಾದ್ ಉಪನಗರಗಳವರೆಗೆ ಹರಡಿವೆ. ದೆಹಲಿನಗರ ಉತ್ತರ ಭಾರತದಲ್ಲಿ ಉ.ಅ.280 31 ಮತ್ತು ಪೂರ್ವರೇಖಾಂಶ 77, 17 ಮೇಲಿರುವ ದೆಹಲಿ ಯಮುನಾನದಿಯ ದಮಡೆಯ ಮೇಲಿದೆ. ರಾಜ್ಯದಲ್ಲಿ 165ಗ್ರಾಮಗಳೂ 62 ಪಟ್ಟಣಗಳೂ ಇವೆ. ವಿಸ್ತಾರ 1483ಚ.ಕಿ.ಮೀ. ಜನಸಂಖ್ಯೆ 15,333,741 (2005). ಕೇಂದ್ರಾಡಳಿತ ಪ್ರದೇಶವಾದ ನವದೆಹಲಿ 42.7ಚ.ಕಿ.ಮೀ. ವಿಸ್ತಾರವಿದ್ದು ಜನಸಂಖ್ಯೆ 2,94,783 (2001). 

	ಕ್ರಿ.ಪೂ. 1ನೆಯ ಶತಮಾನದಲ್ಲಿದ್ದ ಮೌರ್ಯ ದೊರೆ ಧಿಲು ಎಂಬಾತ ಈಗಿನ ಕುತುಬ್ ಮಿನಾರಿನ ಬಳಿ ಒಂದು ಪಟ್ಟಣವನ್ನು ನಿರ್ಮಿಸಿ ಅದಕ್ಕೆ ತನ್ನ ಹೆಸರನ್ನೇ ಇಟ್ಟನೆಂದೂ ಅದೇ ಹೆಸರು ಈಗ ದೆಹಲಿ, ದಿಲ್ಲಿ, ಧಿಲ್ಲಿ, ಮುಂತಾದರೂಪಗಳಲ್ಲಿ ಉಳಿದಿದೆಯೆಂದೂ ಹೇಳಲಾಗಿದೆ. ಹಿಮಾಲಯದಿಂದ ಸುಮಾರು 161 ಕಿ.ಮೀ. ದಕ್ಷಿಣಕ್ಕೆ, ಭಾರತದ ಸಂಚಾರ ಮಾರ್ಗಗಳ ಮಧ್ಯಬಿಂದುವಿನಂತೆ ಇರುವ ದೆಹಲಿಯ ಸ್ಥಾನ ಮಹತ್ತ್ವಪೂರ್ಣವಾದ್ದು. ಇದು ಭಾರತದ ಅನೇಕ ಸಾಮ್ರಾಜ್ಯಗಳ ರಾಜಧಾನಿಯಾಗಿತ್ತು. ದೆಹಲಿಯ ಪ್ರದೇಶದಲ್ಲಿ ಹಲವಾರು ಪಟ್ಟಣಗಳು ನಿರ್ಮಿತವಾಗಿ ನಾಶಹೊಂದಿವೆ. ಕನಿಷ್ಠ ಏಳು ಪಟ್ಟಣಗಳಾದರೂ ಇಲ್ಲಿ ಎದ್ದಿವೆಯೆಂದು ಹೇಳಲಾಗಿದೆ. ಈ ಸ್ಥಳಗಳೆಲ್ಲ ಸುಮಾರು 70 ಚ. ಮೈ. ವಿಸ್ತೀರ್ಣದ ತ್ರಿಕೋಣಾಕಾರದ ಪ್ರದೇಶದಲ್ಲಿವೆ. ಈ ಪ್ರದೇಶದ ಪಶ್ಚಿಮ ದಕ್ಷಿಣ ಅಂಚುಗಳಲ್ಲಿ ಅರಾವಲಿ ಪರ್ವತದ ಎರಡು ಕವಲುಗಳಿವೆ. ಇನ್ನೊಂದು ಅಂಚಿನಲ್ಲಿ ಯಮುನಾ ನದಿ ಹರಿಯುತ್ತದೆ. ಈಗಿನ ದೆಹಲಿ ಪ್ರದೇಶದ ಪಶ್ಚಿಮಕ್ಕಿರುವ ಅರಾವಲಿ ಪರ್ವತದ ಕವಲಿಗೆ ದೆಹಲಿ ಶ್ರೇಣಿಯೆಂದೇ ಹೆಸರುಂಟು.

	ದೆಹಲಿ ಪ್ರದೇಶ ಸಮುದ್ರ ಮಟ್ಟದಿಂದ 700 - 1,000 ಅಡಿ ಎತ್ತರದಲ್ಲಿದೆ. ದೆಹಲಿಯದು ಒಣ ವಾಯುಗುಣ. ಬೇಸಗೆಯಲ್ಲಿ ಕಡು ಸೆಕೆ; ಚಳಿಗಾಲದಲ್ಲಿ ತೀವ್ರ ಚಳಿ, ಮಳೆಗಾಲವನ್ನುಳಿದು ಮಿಕ್ಕ ಋತುಗಳಲ್ಲಿ ಪಶ್ಚಿಮ ಅಥವಾ ವಾಯುವ್ಯದಿಂದ ನೆಲದ ಮೇಲಣ ಗಾಳಿ ಬೀಸುತ್ತದೆ. ಮಾರ್ಚಿಯ ನಡುವಿನಿಂದ ಜೂನ್ ಕೊನೆಯವರೆಗಿನದು ಬೇಸಗೆ. ಆಗಿನ ಸರಾಸರಿ ಗರಿಷ್ಠ ಕನಿಷ್ಠ ಉಷ್ಣತೆಗಳು ಅನುಕ್ರಮವಾಗಿ 360 (970) ಮತ್ತು 250 (770). ಆಗ ಪದೇಪದೇ ಜೋರಾದ ಬಿಸಿಗಾಳಿ ಬೀಸುವುದುಂಟು. ಬೇಸಗೆಯ ಅನಂತರ ಸೆಪ್ಟೆಂಬರ್ ಕೊನೆಯವರೆಗೆ ಮಳೆಗಾಲ. ಸರಾಸರಿ ಮಳೆ 25". ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ವಾಯುಗುಣ ತಂಪಾಗಿರುತ್ತದೆ. ನವೆಂಬರ್ ಕೊನೆಯಿಂದ ಫೆಬ್ರವರಿಯವರೆಗೆ ಚಳಿಗಾಲ. ಸರಾಸರಿ ಗರಿಷ್ಠ ಕನಿಷ್ಠ ಉಷ್ಣತೆಗಳು ಅನುಕ್ರಮವಾಗಿ 210 (700) ಮತ್ತು 110 ಅ (520 ಈ). ಚಳಿ ತಿಂಗಳುಗಳಲ್ಲಿ ಒಮ್ಮೊಮ್ಮೆ ರಾತ್ರಿಯ ವೇಳೆಯಲ್ಲಿ ತಂಪಾದ ನೆಲದ ಮೇಲಣ ಗಾಳಿ ಬಿಸಿಯಾಗಿಯೇ ಉಳಿದು ಕಲ್ಲಿದ್ದಲ ದೂಳು ಹೊಗೆ ಮುಂತಾದವು ತಪ್ಪಿಸಿಕೊಳ್ಳದಂತೆ ತಡೆಹಿಡಿದು, ನಗರದ ವಾತಾವರಣವನ್ನು ಕಲುಷಿತಗೊಳಿಸುವುದುಂಟು. 		

	ದೆಹಲಿ ಪ್ರದೇಶದ ಸ್ವಾಭಾವಿಕ ಸಸ್ಯವರ್ಗ ಮೇಲ್ಮೈಲಕ್ಷಣಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಅರಾವಳಿ ಶ್ರೇಣಿಯಲ್ಲೂ ಅದರ ಬುಡದಲ್ಲೂ ಜಾಲಿ ಮುಂತಾದ ಮುಳ್ಳು ಗಿಡ ಮರಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಎಲೆ ಜಾತಿಯ ಸಸ್ಯಗಳು ಸಮೃದ್ಧವಾಗಿರುತ್ತವೆ. ಮೈದಾನ ಪ್ರದೇಶದಲ್ಲಿ ಸಾಗುವಾನಿಯ ಸಿಸಿವೆ ಮರಗಳು ಸಾಮಾನ್ಯವಾಗಿವೆ. ಯಮುನಾ ನದಿಯ ದಂಡೆಯಲ್ಲಿ ಹುಲ್ಲು ಜೊಂಡು ಹೆಚ್ಚು. ಹೆಚ್ಚು ನೆರಳಿರುವ ಬೇವು, ಮಾವು, ಅರಳಿ, ಸಿಸಿವೆ ಮುಂತಾದ ಮರಗಳು ದೆಹಲಿಯಲ್ಲಿ ವಿಶೇಷವಾಗಿ ಬೆಳೆಯುತ್ತವೆ. ಹೂ ಬಿಡುವ ಗಿಡಗಳಿಗೂ ದೆಹಲಿ, ಪ್ರಸಿದ್ಧ. ಸೇವಂತಿಗೆ, ಫ್ಲಾಕ್ಸ್, ಪುರುಷರತ್ನ (ವೈಯೊಲ) ಮುಂತಾದವು ಚಳಿಗಾಲದ ಹೂಗಳು. ವಸಂತದಲ್ಲಿ ಗುಲಾಬಿ ಹೂ ಬಿಡುತ್ತದೆ. ದೆಹಲಿಯಲ್ಲಿ ಋತುಗಳ ಬದಲಾವಣೆಯನ್ನು ಹೂಗಳು ಸೂಚಿಸುತ್ತವೆ.

	ದೆಹಲಿಯ ಪ್ರಾಣಿಜೀವನವೂ ವೈವಿಧ್ಯಮಯವಾದ್ದು. ಚಿರತೆ, ಕಿರುಬ, ನರಿ, ತೋಳ ಇವು ಕಾಡುಗಳಲ್ಲೂ ಬೆಟ್ಟಗಳಲ್ಲೂ ಇವೆ. ಯಮುನಾ ನದಿಯ ದಂಡೆಯ ಮೇಲೆ ಕಾಡುಹಂದಿ ಇರುವುದುಂಟು. ಕೋತಿಗಳೂ ಇವೆ. ಕವುಜುಗ, ಪಾರಿವಾಳ, ಗಿಳಿ, ಲಾವಕ್ಕಿ ಮುಂತಾದವು ಇಲ್ಲಿಯ ಹಕ್ಕಿಗಳು. ಯಮುನಾ ನದಿಯಲ್ಲಿ ಮೀನುಗಳೂ ಅಪರೂಪವಾಗಿ ಮೊಸಳೆಯೂ ಇವೆ. 	ದೆಹಲಿಯ ಜನಸಂಖ್ಯೆ 1911 - 1961ರ ಅವಧಿಯಲ್ಲಿ ಹತ್ತು ಮಡಿ, ಎಂದರೆ ಸುಮಾರು 2,40,000 ದಿಂದ ಸುಮಾರ 23,50,000 ಕ್ಕೆ, ಬೆಳೆಯಿತು. 1941 - 51ರಲ್ಲಿ ಇಮ್ಮಡಿಸಿತು. ಭಾರತ ವಿಭಜನೆಯ ಫಲವಾಗಿ ನಿರಾಶ್ರಿತರು ಅಧಿಕ ಸಂಖ್ಯೆಯಲ್ಲಿ ಬಂದದ್ದು ಇದಕ್ಕೆ ಮುಖ್ಯ ಕಾರಣ. 1961 - 71ರಲ್ಲಿ ಬೆಳವಣಿಗೆಯ ದರ ಭಾರತದ ಇತರ ನಗರಗಳ ಬೆಳವಣಿಗೆಯ ದರಗಳಿಗಿಂತ ಅಧಿಕವಾಗಿಯೇ ಇದೆ. ನಗರದ ಸರಾಸರಿ ಸ್ಥೂಲ ಜನಸಾಂದ್ರತೆ ಚ.ಮೈ. ಗೆ 35,000. ಆದರೆ ನಗರದ ವಿವಿಧ ಭಾಗಗಳಲ್ಲಿ ಇದರಲ್ಲಿ ತೀವ್ರ ಅಂತರಗಳಿವೆ. ಹಳೆ ದೆಹಲಿಯ ಸದರ್ ಗಂಜ್ ಪ್ರದೇಶದಲ್ಲಿ ಚ. ಮೈ.ಗೆ 1,00,000 ಆದರೆ ನವ ದೆಹಲಿಯಲ್ಲಿ 18,000 ಮತ್ತು ದಂಡಿನ ಪ್ರದೇಶದಲ್ಲಿ 3,300. ದೆಹಲಿಯಲ್ಲಿ ಪ್ರತಿ 1,000 ಗಂಡಸರಿಗೆ 801 ಹೆಂಗಸರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಸೇಕಡ 53ರಷ್ಟು ಮಂದಿ ಅವಿವಾಹಿತರು. ಸುಮಾರು ಅರ್ಧದಷ್ಟು ಜನ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ದೆಹಲಿ ನಗರದ ಜನರಲ್ಲಿ ಸೇ. 56.61 ಮಂದಿ ಅಕ್ಷರಸ್ಥರು. ಜನಸಂಖ್ಯೆಯ ಸೇ. 30 ಜನ ದುಡಿಯುವವರು. ದೆಹಲಿಯ ಜನಸಂಖ್ಯೆಯಲ್ಲಿ ಸೇ. 56ರಷ್ಟು ಮಂದಿ ಹೊರಗಿನಿಂದ ಬಂದವರು. ಇವರಲ್ಲಿ 36% ಮಂದಿ ಇತರ ರಾಜ್ಯಗಳಿಂದ ಬಂದವರು. ನೆರೆಯ ದೇಶಗಳಿಂದ ಬಂದ ಜನ 10%. 0.02% ಮಂದಿ ವಿದೇಶಗಳಿಂದ ಬಂದು ವಾಸಿಸುತ್ತಿರುವವರು.

	ಹಳೆಯ ದೆಹಲಿಯ ವಸತಿಗಳು ಅಯೋಜಿತ, ಹೊಸ ದೆಹಲಿಯಲ್ಲಿ ಸರ್ಕಾರ ವಸತಿಯೋಜನೆಯನ್ನು ವ್ಯಾಪಕವಾಗಿ ಕೈಗೊಂಡಿವೆ. ಜೊತೆಗೆ ದೆಹಲಿ ಮುನಿಸಿಪಲ್ ಕಾರ್ಪೊರೇಷನ್, ಹೊಸ ದೆಹಲಿ ಪೌರಸಮಿತಿ, ದೆಹಲಿ ಆಡಳಿತ ಮತ್ತು ಇತರ ನಾನಾ ಸಂಘ ಸಂಸ್ಥೆಗಳು ಇದನ್ನು ನಿರ್ವಹಿಸುತ್ತಿವೆ. ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ನಿರ್ಮಲೀಕರಣ ಇವು ಮುನಿಸಿಪಲ್ ಕಾರ್ಪೊರೇಷನ್ ಕಡ್ಡಾಯವಾಗಿ ನಿರ್ವಹಿಸಬೇಕಾದ ಕಾರ್ಯಗಳು. ನಗರ ಸಾರಿಗೆ, ವಿದ್ಯುದುತ್ಪಾದನೆ ಮತ್ತು ವಿತರಣೆ ಇವು ಕಡ್ಡಾಯವಲ್ಲವಾದರೂ ಕಾರ್ಪೊರೇಷನ್ ಇವನ್ನು ನಿರ್ವಹಿಸುತ್ತಿದೆ. ನೀರು ಸರಬರಾಜು ಮತ್ತು ಗ್ರಾಮಸಾರ ವ್ಯವಸ್ಥೆ, ವಿದ್ಯುತ್ ಸರಬರಾಜು, ಸಾರಿಗೆ - ಇವಕ್ಕೆ ಪ್ರತ್ಯೇಕ ಪರಿನಿಯತ ವ್ಯವಸ್ಥೆಗಳಿವೆ. ನೀರಿಗೆ ಯಮುನಾ ನದಿ ಮುಖ್ಯ ಮೂಲ. ಬೇಸಗೆಯಲ್ಲಿ ನದಿ ಬಹುತೇಕ ಬತ್ತಿರುವುದರಿಂದ ತೊಂದರೆಯಾಗುತ್ತದೆ. ನಗರಕ್ಕೆ ವಿದ್ಯುತ್ ಉಷ್ಣವಿದ್ಯುದಾಗಾರಗಳಿಂದಲೂ ಭಕ್ರಾ -ನಂಗಾಲ್ ಜಲವಿದ್ಯುತ್ ಜಾಲದಿಂದಲೂ ಸರಬರಾಜಾಗುತ್ತದೆ. ದೆಹಲಿಯಲ್ಲಿ 1970ರಲ್ಲಿ ಒಟ್ಟು 10,352 ಹಾಸಿಗೆಗಳ 55 ಆಸ್ಪತ್ರೆಗಳೂ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳೂ 15 ಆಯುರ್ವೇದ ಯುನಾನಿ ಔಷಧಾಲಯಗಳೂ ಇದ್ದುವು. ಅಖಿಲಭಾರತದ ವೈದ್ಯ ವಿಜ್ಞಾನ ಸಂಸ್ಥೆ, ವಿಲಿಂಗ್ಡನ್ ಆಸ್ಪತ್ರೆ, ಸಫ್ದರ್‍ಜಂಗ್ ಆಸ್ಪತ್ರೆ ಇವನ್ನು ಸರ್ಕಾರವೂ ಅರ್ವಿನ್ ಆಸ್ಪತ್ರೆ, ಜೆ. ಬಿ. ಪಂತ್ ಆಸ್ಪತ್ರೆ ಇವನ್ನು ದೆಹಲಿ ಆಡಳಿತವೂ ನಿರ್ವಹಿಸುತ್ತಿದೆ.

	ದೆಹಲಿಯಲ್ಲಿ ಶಾಲೆಗಳೂ ಉನ್ನತ ಪ್ರೌಢಶಾಲೆಗಳೂ ಇವೆ. ದೆಹಲಿಯಲ್ಲಿ ಆಟ್ರ್ಸ್ ಮತ್ತು ವಿಜ್ಞಾನ ಕಾಲೇಜುಗಳೂ ಎಂಜಿನಿಯರಿಂಗ್ ಮತ್ತು ತಂತ್ರ ವಿಜ್ಞಾನ ಕಾಲೇಜುಗಳೂ ದೆಹಲಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಗಳೂ ಇವೆ.

	ದೆಹಲಿಯ ಸಾಂಸ್ಕøತಿಕ ಜೀವನ ವೈವಿಧ್ಯಮಯವಾದ್ದು. ಕೆಲವು ನಾಟಕ ಶಾಲೆಗಳೂ ಇತರ ಸಾಂಸ್ಕøತಿಕ ಸಂಘಗಳೂ ಇವೆ. ಹಳೆಯ ನೃತ್ಯ ಸಂಗೀತ ಮುಷಾಯಿರಗಳ ಬದಲು ಚಲನಚಿತ್ರಗಳೂ ಕ್ಲಬ್ಬುಗಳೂ ಜನಪ್ರಿಯವಾಗುತ್ತಿವೆ. ಅಖಿಲ ಭಾರತ ಸ್ವರೂಪದ ಸಂಗೀತ ನಾಟಕ ಅಕಾಡಮಿ, ಲಲಿತ ಕಲಾ ಅಕಾಡಮಿ, ಸಾಹಿತ್ಯ ಅಕಾಡಮಿ - ಇವುಗಳ ಕೇಂದ್ರ ದೆಹಲಿ. 1957ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಪುಸ್ತಕ ಟ್ರಸ್ಟ್ ಭಾರತೀಯ ಭಾಷೆಗಳಲ್ಲಿ ವಿವಿಧ ವಿಷಯಗಳ ಮೇಲೆ ಪುಸ್ತಕಗಳನ್ನು ಪ್ರಕಟಿಸುತ್ತದೆ. ಜಾಗತಿಕ ಸಂಗತಿಗಳ ಸಂಸ್ಥೆ ಮತ್ತು ಸಾಂಸ್ಕøತಿಕ ಸಂಬಂಧಗಳ ಭಾರತೀಯ ಸಮಿತಿ - ಇವು ಅಂತರರಾಷ್ಟ್ರೀಯ ತಿಳಿವಳಿಕೆ ಮತ್ತು ಸಹಕಾರ ಹೆಚ್ಚಿಸುವಲ್ಲಿ ನೆರವಾಗುತ್ತಿವೆ. ಈ ಸಾಂಸ್ಕøತಿಕ ಸಂಬಂಧಗಳ ಸಮಿತಿಯ ಪರವಾಗಿ ಪ್ರತಿ ವರ್ಷವೂ ಅಂತರರಾಷ್ಟ್ರೀಯ ಶಾಂತಿ - ಸಹಕಾರಕ್ಕಾಗಿ ವಿಶೇಷ ಶ್ರಮ ವಹಿಸಿದ ಮಹನೀಯರಿಗೆ ನೆಹರೂ ಹೆಸರಿನಲ್ಲಿ ಪುರಸ್ಕಾರ ನೀಡಲಾಗುತ್ತದೆ. ದೆಹಲಿಯ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಜನತೆಗೆ ಜ್ಞಾನ ಮತ್ತು ಮನೋರಂಜನೆಗಳನ್ನು ಪೂರೈಸುತ್ತವೆ. ನವ್ಯಕಲೆಯ ರಾಷ್ಟ್ರೀಯ ಚಿತ್ರಶಾಲೆಯಲ್ಲಿ ಸುಮಾರು 100 ಕಲಾವಿದರ ಕಲಾಕೃತಿಗಳಿವೆ.

	ದೆಹಲಿ ಈಗ ಒಕ್ಕೂಟ ಪ್ರದೇಶವಾಗಿದೆ (ಯೂನಿಯನ್ ಟೆರಿಟೊರಿ). ರಾಷ್ಟ್ರಪತಿಗಳಿಂದ ನಾಮಕರಣಗೊಂಡ 5 ಮಂದಿ ಸದಸ್ಯರು ಹಾಗೂ 56 ಮಂದಿ ಚುನಾಯಿತ ಸದಸ್ಯರು ಇರುವ ನಗರ ಪರಿಷತ್ತು ಇದೆ. (ಮೆಟ್ರೊಪಾಲಿಟಿನ್ ಕೌನ್ಸಿಲ್). ಉಪರಾಜ್ಯಪಾಲರು ಇದರ ಆಡಳಿತಗಾರರು. ಇವರಿಗೆ ನೆರವಾಗಿ ಒಬ್ಬ ಮುಖ್ಯ ಕಾರ್ಯನಿರ್ವಾಹಕ ಸಭಾಸದರೂ (ಕೌನ್ಸಿಲರ್) ಮೂವರು ಕಾರ್ಯನಿರ್ವಾಹಕ ಸಭಾಸದರು ಇರುತ್ತಾರೆ. ಇವರನ್ನು ಒಕ್ಕೂಟ ಗೃಹ ಮಂತ್ರಾಲಯದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ. ನಗರ ಪರಿಷತ್ತಿಗೆ ಒಬ್ಬ ಸಭಾಪತಿ ಇರುತ್ತಾರೆ. ಇಡೀ ಪ್ರದೇಶಕ್ಕೆ ದೆಹಲಿ ನಗರ ಕಾರ್ಪೋರೇಷನ್, ನವ ದೆಹಲಿ ನಗರ ಸಮಿತಿ ಮತ್ತು ದೆಹಲಿ ದಂಡು ಪ್ರದೇಶ ಮಂಡಲಿ ಎಂಬ ಮೂರು ಸ್ಥಳೀಯ ಸಂಸ್ಥೆಗಳಿವೆ. ದೆಹಲಿಯ ಇಪ್ಪತ್ತು ವರ್ಷಗಳ ಗುರುಯೋಜನೆಯನ್ನು (ಮಾಸ್ಟರ್ ಪ್ಲಾನ್) ಜಾರಿಗೆ ಕೊಡಲು ದೆಹಲಿ ಅಭಿವೃದ್ಧಿ ಪ್ರಾಧಿಕರಣ (ಅಥಾರಿಟಿ) ಎಂಬ ಸಂಸ್ಥೆಯಿದೆ.

	ಹಳೆ ದೆಹಲಿ ನಗರ ಹಿಂದಿನರಕ್ಷಣಾ ಅಗತ್ಯಗಳಿಗೆ ತಕ್ಕಂತೆರೂಪುಗೊಂಡಿದೆ. ಮುಖ್ಯ ಬೀದಿಗಳು ನಗರದ ಮಹಾದ್ವಾರಗಳ ಮೂಲಕ ಸಾಗುತ್ತವೆ. ಇತರ ಬೀದಿಗಳು ಕಿರಿದು ಮತ್ತು ಅಂಕುಡೊಂಕು. ಇವುಗಳಲ್ಲಿ ಆಧುನಿಕ ವಾಹನ ಸಂಚಾರ ಸಾಧ್ಯವಿಲ್ಲ. ಇಲ್ಲಿಯ ಜನಸಾಂದ್ರತೆ ಪ್ರತಿ ಚ. ಮೈ. ಗೆ 35.000.

	ಹಳೆಯ ಬ್ರಿಟಿಷ್ ಸರ್ಕಾರ ತನ್ನ ಉನ್ನತ ಅಧಿಕಾರಿಗಳಿಗಾಗಿ ಉತ್ತರದಲ್ಲಿರಚಿಸಿದ ವಸತಿ ಪ್ರದೇಶವಾಗಿ ಸಿವಿಲ್ ಲೈನ್ಸ್ ಹಾಗೂ ದಕ್ಷಿಣದಲ್ಲಿರುವ ನವದೆಹಲಿ ಇವು ವಿಶಾಲರಸ್ತೆಗಳಿಂದಲೂ ಹಸಿರು ಹುಲ್ಲು ಹಾಗೂ ಗಿಡಮರಗಳಿಂದಲೂ ಕೂಡಿ ಕ್ರಮಬದ್ಧವಾಗಿವೆ. 1911ರಲ್ಲಿ ಭಾರತದ ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ವರ್ಗಾಯಿಸಬೇಕೆಂದು ತೀರ್ಮಾನಿಸಿದಾಗ ರಾಜಧಾನಿಯ ಕಚೇರಿ ಕಾರ್ಯಾಲಯಗಳರಚನೆಗಾಗಿ ಹೊಸ ನಗರ ಯೋಜನಾ ಸಮಿತಿಯೊಂದನ್ನುರಚಿಸಲಾಯಿತು. ಎಡ್ವಿನ್ ಲೂಟಿನ್ಸ್‍ನ ನೇತೃತ್ವದಲ್ಲಿ, ವಾಷಿಂಗ್‍ಟನ್ ಮತ್ತು ಲಂಡನ್ ನಗರಗಳ ವಿಶಿಷ್ಟ ಲಕ್ಷಣಗಳನ್ನು ಅಳವಡಿಸಿಕೊಂಡ ಉದ್ಯಾನನಗರಿಯೆನಿಸುವಂಥ ನವ ದೆಹಲಿಯ ನಕ್ಷೆ ಸಿದ್ಧವಾಯಿತು. ಮೊದಲು 70,000 ಜನರ ವಸತಿಗೆ ಸಾಲುವಂತೆ 16 ಚ. ಕಿಮೀ. ವಿಸ್ತೀರ್ಣದ ಕ್ಷೇತ್ರದಲ್ಲಿ ಕಟ್ಟಡಗಳ ನಿರ್ಮಾಣಕಾರ್ಯ ಆರಂಭವಾದರೂ ಕ್ರಮೇಣ 55 ಚ.ಕಿಮೀ. ವಿಸ್ತಾರವುಳ್ಳ ಹೊಸ ರಾಜಧಾನಿರೂಪುಗೊಂಡಿತು. ಮೂಲ ಯೋಜನೆಯನ್ವಯ ಮಹತ್ತ್ವದ ಕಟ್ಟಡಗಳೆಲ್ಲ 1920 - 30ರ ಅವಧಿಯಲ್ಲಿ ಸಿದ್ಧಗೊಂಡು 1931ರ ಫೆಬ್ರವರಿ 8ರಂದು ಹೊಸ ರಾಜಧಾನಿಯ ಅನೌಪಚಾರಿಕ ಉದ್ಘಾಟನೆ ಆಯಿತು. ಹರ್ಬರ್ಟ್ ಬೇಕರ್‍ನ ಮೇಲ್ವಿಚಾರಣೆಯಲ್ಲಿ ನಿರ್ಮಿತವಾದ ಉತ್ತರ - ದಕ್ಷಿಣ ಸಚಿವಾಲಯಗಳು ಮೊಗಲ್ ಉದ್ಯಾನದಿಂದ ಕೂಡಿದ ವೈಸ್‍ರಾಯ್ ನಿವಾಸ (ಈಗಿನ ರಾಷ್ಟ್ರಪತಿ ಭವನ), ಸಂಸತ್ ಭವನ ಇವು ದೆಹಲಿಯ ಪ್ರಮುಖ ಕಟ್ಟಡಗಳು. ಇವು ರೋಮನ್ ಮತ್ತು ಭಾರತೀಯ ವಾಸ್ತುಗಳ ಸಮನ್ವಯದ ಫಲವಾದ ಆಧುನಿಕ ಮಾದರಿಯ ಭವನಗಳು. ಎರಡೂ ಸಚಿವಾಲಯಗಳ ಎದುರಿಗೇ ಗೋಚರಿಸುವ ವಿಜಯ ಚೌಕ ಹೊಸ ಮತ್ತು ಹಳೆಯ ದೆಹಲಿಗಳ ಎಲ್ಲ ಭಾಗಗಳನ್ನೂ ಕೂಡಿಸುವರಸ್ತೆಗಳ ಕೇಂದ್ರ ಬಿಂದುವಾಗಿ ನಿಂತಂತಿದೆ. ಪ್ರತಿ ವರ್ಷವೂ ವಿಜಯ ಚೌಕದಲ್ಲಿ ನಡೆಯುವ ಗಣರಾಜ್ಯೋತ್ಸವ ಪ್ರೇಕ್ಷಣೀಯವಾದ್ದು. ವಿಜಯ ಚೌಕದ ಪೂರ್ವಕ್ಕೆ ವೀರ ಸೈನಿಕರ ಸ್ಮಾರಕವಾಗಿ ನಿಂತ ಇಂಡಿಯ ಗೇಟ್ ಇದೆ. ಅಖಂಡ ಭಾರತ ಇಬ್ಭಾಗವಾದ ಅನಂತರ ಪಾಕಿಸ್ತಾನದಿಂದ ಬಂದ ಸುಮಾರು 5,00,000 ನಿರಾಶ್ರಿತರಿಗಾಗಿ ರಾಜೇಂದ್ರ ನಗರ, ಪಟೇಲ್ ನಗರ, ಜಂಗ್‍ಪುರ, ನಿಜಾಮುದ್ದೀನ್, ಲಜಪತ್ ನಗರ - ಮುಂತಾದ ಉಪನಗರಗಳು ಹುಟ್ಟಿಕೊಂಡವು. ನವ ದೆಹಲಿಯಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯ, ಸರ್ವೋಚ್ಚ ನ್ಯಾಯಾಲಯ, ರಾಷ್ಟ್ರೀಯ ಭೌತ ಪ್ರಯೋಗಾಲಯ, ರಿಸರ್ವ್ ಬ್ಯಾಂಕ್, ವೈದ್ಯಶಾಸ್ತ್ರಗಳ ಭಾರತೀಯ ಸಂಸ್ಥೆ, ದೆಹಲಿ ಸಾರ್ವಜನಿಕ ವಾಚನಾಲಯ ಇವಲ್ಲದೆ ವಿದೇಶೀ ರಾಯಭಾರಿಗಳ ಮತ್ತು ಪ್ರತಿನಿಧಿಗಳ ಕಾರ್ಯಾಲಯಗಳೂ ನಿವಾಸಗಳೂ ನೋಡತಕ್ಕ ಕಟ್ಟಡಗಳಾಗಿವೆ. ಯಮುನೆಯ ಪಶ್ಚಿಮ ದಂಡೆಯ ಮೇಲಿರುವ ರಾಜ್‍ಘಾಟ್ (ಗಾಂಧೀಜಿಯವರ ಸಮಾಧಿ), ಶಾಂತಿ ಘಾಟ್ (ನೆಹರೂ ಸಮಾಧಿ) ಮತ್ತು ವಿಜಯ್ ಘಾಟ್ (ಲಾಲ್ ಬಹಾದೂರ್ ಶಾಸ್ತ್ರಿ ಸಮಾದಿ) ಇವನ್ನು ನಿತ್ಯವೂ ಸಾವಿರಾರು ಜನರು ಪ್ರೇಕ್ಷಿಸುತ್ತಾರೆ.

	ಹಳೆ ದೆಹಲಿಯ ಬಹುಭಾಗ ಶಾಹಜಹಾನ್ ದೊರೆ ಕಟ್ಟಿಸಿದ ಕೋಟೆಯೊಳಗಡೆಯೇ ಇದೆ. ಕೋಟೆಯಲ್ಲಿ ಒಟ್ಟಿನಲ್ಲಿ 27 ಗೋಪುರಗಳೂ 14 ಮಹಾದ್ವಾರಗಳೂ ಇದ್ದುವು, ಈ ದ್ವಾರಗಳ ಪೈಕಿ ಕಾಶ್ಮೀರಿ ದ್ವಾರ, ದಿಲ್ಲೀ ದ್ವಾರ, ತುರ್ಕ್‍ಮನ್ ದ್ವಾರ, ಅಜಮೇರಿ ದ್ವಾರ ಮುಂತಾದ ಕೆಲವು ಈಗಲೂ ಇವೆ. 75 ಅಡಿ ಎತ್ತರವಾದ ಭದ್ರಗೋಡೆಗಳುಳ್ಳ ಕೆಂಪುಕೋಟೆ ಮೊಗಲ್ ಆಳ್ವಿಕೆಯ ವೈಭವದ ಪ್ರತೀಕವಾಗಿ ನಿಂತಿದ್ದು, ಅದರೊಳಗಿರುವ ದಿವಾನ್ - ಇ - ಆಮ್ ಮತ್ತು ದಿವಾನ್ - ಇ - ಖಾಸ್ ಅರಮನೆಗಳು, ಔರಂಗ್‍ಜೇóಬ್ ಕಟ್ಟಿಸಿದ ಮೋತಿ ಮಸೀದಿ ಮತ್ತಿತರ ಭವನಗಳು ಇಂದಿಗೂ ಕಣ್ಸೆಳೆಯುವ ಹಾಗಿವೆ. ಕೆಂಪುಕೋಟೆಯಲ್ಲಿ ನಿತ್ಯ ಸಂಜೆ ನಡೆಯುವ ಶಬ್ದ - ಪ್ರಕಾರ ಕಾರ್ಯಕ್ರಮದಲ್ಲಿ ಇಡಿಯ ದೆಹಲಿಯ ಚರಿತ್ರೆ ಮೂಡಿಬರುತ್ತದೆ. ಕೋಟೆಯ ಎದುರಿಗೆ 4,560 ಅಡಿ ಉದ್ದ ಮತ್ತು 120 ಅಡಿ ಅಗಲವಾಗಿ ಹಬ್ಬಿಕೊಂಡಿರುವ ಚಾಂದ್ನಿ ಚೌಕ ಮೊಗಲ್ ಅರಸರ ಕಾಲಕ್ಕೆ ಜಗತ್‍ಪ್ರಸಿದ್ಧ ವ್ಯಾಪಾರ ಕೇಂದ್ರವೆನಿಸಿತ್ತು. ಚಾಂದನೀ ಚೌಕದ ದಕ್ಷಿಣಕ್ಕೆ ಶಾಹಜಹಾನ್ ದೊರೆ ಕಟ್ಟಿಸಿದ ಭವ್ಯವಾದ ಜಾಮಿಯ ಮಸೀದಿಯುಂಟು. ಸುಂದರವಾದ ಮಸೀದಿಗಳಿಗೂ ಉದ್ಯಾನವನಗಳಿಗೂ ಲಕ್ಷ್ಮೀ ನಾರಾಯಣ ಮಂದಿರದಂಥಗುಡಿಗಳಿಗೂ ದೆಹಲಿ ಪ್ರಸಿದ್ಧವಾಗಿದೆ. ದೆಹಲಿಯಿಂದ ದಕ್ಷಿಣಕ್ಕೆ 13 ಕಿಮೀ. ದೂರದಲ್ಲಿರುವ ಶಿಲಾಸ್ತಂಭ 2ನೆಯ ಚಂದ್ರಗುಪ್ತ (375 - 413) ಮತ್ತು ರಾಜ ಅನಂಗಪಾಲರ (1052 - 1109) ವಿಜಯದ ಹೆಗ್ಗುರುತಾಗಿ ನಿಂತಿದೆ. ಈ ವಿಜಯ ಸ್ತಂಭದ ಹತ್ತಿರವೇ ಕುತುಬ್‍ಮಿನಾರ್ ಇದೆ. ಕುತ್ಬ್-ಉದ್-ದೀನ್ ಐಬಕ್‍ನ ಸ್ಮಾರಕವಾಗಿ ಕುತುಬ್ ಮೀನಾರ್ ಇಂದಿಗೂ ಪ್ರೇಕ್ಷಣೀಯವಾಗಿದೆ. ಹುಮಾಯೂನ್ ದೊರೆ ತೀರಿಕೊಂಡ ತರುವಾಯ ಇವನ ರಾಣಿ ಹಾಜೀ ಬೇಗಂ 1565ರಲ್ಲಿ ಕಟ್ಟಿಸಿದ ಪರ್ಷಿಯನ್ ಶೈಲಿಯ ಹುಮಾಯೂನ್ ಸಮಾಧಿ ಬಲು ಭವ್ಯವಾದ್ದು. ಶಾಹಜಾನ್ ದೊರೆ ಆಗ್ರದಲ್ಲಿ ಕಟ್ಟಿಸಿದ ಜಗತ್‍ಪ್ರಸಿದ್ಧ ತಾಜ್ ಮಹಲಿಗೆ ಹುಮಾಯೂನನ ಸಮಾಧಿಯೇ ಮಾದರಿಯಾಯಿತೆಂದು ಪ್ರತೀತಿ. ಜಯಪುರದ ಎರಡನೆಯ ಜಯಸಿಂಹ ದೊರೆ 1710ರಲ್ಲಿ ನಿರ್ಮಿಸಿದ ಜಂತರ್ ಮಂತರ್ ಕಟ್ಟಡಗಳು ಕುತೂಹಲಕರ.

	ಗೋದಿ, ಕಡಲೆ, ಬತ್ತ, ಸಜ್ಜೆ, ಕಬ್ಬು, ತಂಬಾಕುಗಳು ದೆಹಲಿ ಪ್ರದೇಶದ ಪ್ರಮುಖ ಬೆಳೆಗಳೂ. ದೆಹಲಿಯ ಸುತ್ತಮುತ್ತ ದ್ರಾಕ್ಷಿಯ ತೋಟಗಳನ್ನು ಅಲ್ಲಲ್ಲಿ ಕಾಣಬಹುದು. 6,527 ವಿದ್ಯುತ್ ಚಾಲಿತ ಪಂಪು ಮತ್ತು ಕೊಳವೆ ಬಾವಿಗಳಿಂದ ಇಲ್ಲಿ ನೀರಾವರಿ ನಡೆಯುತ್ತದೆ. 2,52,000 ಜನರಿಗೆ ಉದ್ಯೋಗಾವಕಾಶ ನೀಡಿರುವ 32,000 ಕೈಗಾರಿಕಾ ಘಟಕಗಳು ದೆಹಲಿ ಮತ್ತು ಸುತಮುತ್ತ ಇವೆ. ಉಕ್ಕಿನ ಸಾಮಾನು, ಔಷಧ, ರಾಸಾಯನಿಕ ಪದಾರ್ಥಗಳು. ಬಣ್ಣಗಳು, ದೂರದರ್ಶನ ಉಪಕರಣಗಳು, ರೇಡಿಯೋ, ತೊಗಲಿನ ಮತ್ತುರಬ್ಬರ್ ಸರಕು, ಪಿಂಗಾಣಿ, ನೇಯ್ಗೆ, ದಂತದ ವಸ್ತು, ಜರತಾರಿ, ಆಭರಣ, ತಾಮ್ರ, ಹಿತ್ತಾಳೆ ಪಾತ್ರೆ ಇವು ಇಲ್ಲಿ ತಯಾರಾಗುತ್ತವೆ.

	ದೆಹಲಿ ಭಾರತದ ಎಲ್ಲ ದೊಡ್ಡ ನಗರಗಳೊಡನೆ ಸಂಪರ್ಕ ಹೊಂದಿದೆ. ದೇಶದ ದೊಡ್ಡ ರೈಲ್ವೇ ಜಂಕ್ಷನ್‍ಗಳಲ್ಲಿ ದೆಹಲಿಯೂ ಒಂದು. ಹಲವು ರಾಷ್ಟ್ರೀಯ ಹೆದ್ದಾರಿಗಳು ದೆಹಲಿಯಲ್ಲಿ ಸೇರುತ್ತವೆ. ಹಲವು ಅಂತರ ರಾಷ್ಟ್ರೀಯ ವಿಮಾನ ಮಾರ್ಗಗಳು ಈ ನಗರದ ಮೂಲಕ ಸಾಗುತ್ತವೆ. ಸಫ್ದರ್ ಜಂಗ್ ಮತ್ತು ಪಾಲಂ ವಿಮಾನ ನಿಲ್ದಾಣಗಳಲ್ಲಿ ದೇಶ - ವಿದೇಶಗಳ ವಿಮಾನಗಳು ಬಂದಿಳಿಯುತ್ತವೆ.
(ಬಿ.ಎ.ಎಸ್.)

	ಇತಿಹಾಸ: ದೆಹಲಿ ನಗರದ ಆವರಣ ನೈಸರ್ಗಿಕವಾದ ಕೋಟೆಯಂತಿದೆ. ಈ ಆವರಣದಲ್ಲಿ ಹದಿನೈದು ನಗರಗಳು ಹುಟ್ಟಿ ನಾಶವಾಗಿವೆ ಎಂದು ಇತಿಹಾಸಕಾರರು ಲೆಕ್ಕಹಾಕಿದ್ದಾರೆ. ಪ್ರತಿಯೊಬ್ಬ ಆಕ್ರಮಣಕಾರನೂ ಈ ಸ್ಥಳದಲ್ಲಿದ್ದ ನಗರವನ್ನು ನಾಶಮಾಡಿ ಹೊಸ ನಗರವನ್ನು ಕಟ್ಟುತ್ತಿದ್ದ. ಆದ್ದರಿಂದ ನಿವೇಶನ ಬದಲಾಗುತ್ತ ಬಂತು. ಆದಾಗ್ಯೂ ಈ ನಗರ ತನ್ನ ಅವ್ಯಾಹತವಾದ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ.

	ಮಹಾಭಾರತದ ಕಾಲದಲ್ಲಿ ಯುಧಿಷ್ಠರನಿಂದ ನಿರ್ಮಿತವಾದ ಇಂದ್ರಪ್ರಸ ನಗರ ಈಗಿನ ದೆಹಲಿ ಪ್ರದೇಶದಲ್ಲಿತ್ತೆಂದು ಹೇಳಲಾಗಿದೆ. ಕ್ರಿ.ಪೂ. 1ನೆಯ ಶತಮಾನದಲ್ಲಿ ಈಗ ಕುತುಬ್ ಮಿನಾರ್ ಇರುವ ಸ್ಥಳದಲ್ಲಿ ಧಿಲು ಎಂಬ ದೊರೆ ಒಂದು ನಗರವನ್ನು ಕಟ್ಟಿಸಿ ಅದಕ್ಕೆ ತನ್ನ ಹೆಸರನ್ನೇ ಇಟ್ಟನೆನ್ನಲಾಗಿದೆ. ಮುಂದೆ ಅನಂಗಪಾಲ ದೊರೆ ದೆಹಲಿಯ ಆಗ್ನೇಯ ಭಾಗದಲ್ಲಿ ಹೊಸ ನಗರವೊಂದನ್ನುರಚಿಸಿದ. ಅವನೂ ಅವನ ವಂಶಜರೂ ನಗರವನ್ನು ಬೆಳೆಸಿದರು. ಅದರ ಸುತ್ತ ಕಲ್ಲಿನ ಕೋಟೆ ನಿರ್ಮಾಣವಾಯಿತು. ಅನಂತರ ಬಂದ ಪೃಥ್ವೀರಾಜ ಇದನ್ನು ನಾಲ್ಕು ಸಾರಿ ಪುನರ್ರಚಿಸಿದನಲ್ಲದೆ ಇದನ್ನು ಇನ್ನಷ್ಟು ವಿಸ್ತರಿಸಿದ.

	1911ರಲ್ಲಿ ಮಹಮದ್ ಘೋರಿ ಭಾರತದ ಮೇಲೆ ದಂಡೆತ್ತಿ ಬಂದು ಪೃಥ್ವೀರಾಜನನ್ನು ಸೋಲಿಸಿದ. ತನ್ನ ಗುಲಾಮನಾಗಿದ್ದ ಕುತ್ಬ್ - ಉದ್ - ದೀನ್ ಐಬಕ್‍ನನ್ನು ತಾನು ಗೆದ್ದ ಪ್ರದೇಶಗಳಿಗೆ ನೇಮಿಸಿದ. 1206ರಲ್ಲಿ ಐಬಕ್ ಸ್ವಾತಂತ್ರ್ಯ ಘೋಷಿಸಿಕೊಂಡ. ಅವನೇ ದೆಹಲಿಯ ಪ್ರಥಮ ಸುಲ್ತಾನನೆಂದು ಹೇಳಬಹುದು. ಹಳೆಯ ರಾಜಧಾನಿಯನ್ನು ಅವನು ಉಳಿಸಿಕೊಂಡರೂ ಅಲ್ಲಿದ್ದ 27 ದೇವಾಲಯಗಳನ್ನು ಕೆಡವಿಸಿ ಅದರಿಂದ ದೊರೆತ ಸಾಮಗ್ರಿಯನ್ನು ಉಪಯೋಗಿಸಿಕೊಂಡು ಮಸೀದಿಯೊಂದನ್ನು ಕಟ್ಟಿಸಿದ. ಮೊದಲಿದ್ದ ಎತ್ತರವಾದ ಗೋಪುರಕ್ಕೆ ಹೊಸರೂಪ ಕೊಟ್ಟು ಕುತುಬ್ ಮಿನಾರ್‍ನ್ನು ನಿರ್ಮಿಸಿದನೆನ್ನಲಾಗಿದೆ. ಮುಂದೆ ಒಂದು ಶತಮಾನ ಕಾಲ ದೆಹಲಿಯ ಜೀವನ ಇಲ್ಲಿ ಕೇಂದ್ರೀಯಕೃತವಾಗಿತ್ತು. ಅಲಾ - ಉದ್ - ದೀನ್ ಖಿಲ್ಜಿ (1296 - 1316) ದೆಹಲಿಯ ಈಶಾನ್ಯ ದಿಕ್ಕಿಗೆ ಮೂರು ಮೈಲಿ ದೂರದಲ್ಲಿ ಹೊಸ ಪಟ್ಟಣವನ್ನು ಕಟ್ಟಿಸಿದ. ಕೋಟೆಯನ್ನು ಒಳಗೊಂಡ ಈ ನಗರ ವಿಶಾಲವಾಗಿತ್ತು. ಇದರಲ್ಲಿ 1,000 ಕಂಬಗಳ ಅರಮನೆಯೂ ದೊಡ್ಡ ಕೆರೆಯೂ ಇದ್ದುವು. 1321ರಲ್ಲಿ ಘಿಯಾಸುದ್ದೀನ್ ತುಗಲಕ್ ಈಗಿನ ಕೆಂಪು ಕೋಟೆಯ ಆಗ್ನೇಯಕ್ಕೆ 5 ಮೈಲಿ ದೂರದಲ್ಲಿ ಮತ್ತೊಂದು ಈ ನಗರ ನಾಶವಾಯಿತು. ಅವನ ಮರಣಾನಂತರ ಈ ನಗರ ನಾಶವಾಯಿತು. ಅವನ ಮಗ ಮಹಮದ್-ಬಿನ್-ತುಗಲಕ್ (1325 - 51) ಹೊಸ ರಾಜಧಾನಿಯಾದ ಜಹಾನ್‍ಪನ್ನವನ್ನು ಕಟ್ಟಿದ. ಅವನ ಉತ್ತರಾಧಿಕಾರಿ ಫಿರೋಜ್ ಶಾಹ್ 1354ರಲ್ಲಿ ಇನ್ನೊಂದು ರಾಜಧಾನಿ ಫಿರೋಜಾóಬಾದ್‍ನ್ನು ನಿರ್ಮಿಸಿದ. ಇದು ಈಗಿನ ಕೆಂಪುಕೋಟೆಯಿಂದ ಉತ್ತರಕ್ಕೆ 13 ಕಿ.ಮೀ. ಗಳ ದೂರದಲ್ಲಿತ್ತು. 1398ರಲ್ಲಿ ದೆಹಲಿ ತೈಮೂರನ ವಶವಾಯಿತು. ಅವನು 1,00,000 ಜನರನ್ನು ಕೊಲೆ ಮಾಡಿ ನಗರವನ್ನು ಲೂಟಿಮಾಡಿದ. ಸಯ್ಯದ್ ವಂಶೀಯರು ಇಲ್ಲಿಂದಲೇ ಆಳುತ್ತಿದ್ದರು. ಆದರೆ ಲೋದಿ ಮನೆತನದ ಸುಲ್ತಾನರು ಆಗ್ರಕ್ಕೆ ರಾಜಧಾನಿಯನ್ನು ವರ್ಗಾಯಿಸಿದರು. 

	ಬಾಬರ್ 1526ರಲ್ಲಿ ಇಬ್ರಾಹಿಮ್ ಲೋದಿಯನ್ನು 1ನೆಯ ಪಾಣಿಪಟ್ ಕದನದಲ್ಲಿ ಸೋಲಿಸಿ, ಮೊಗಲ್ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ. ಬಾಬರ್ ಆಗ್ರದಿಂದಲೇ ಆಳುತ್ತಿದ್ದ. ಆದರೆ ಅವನ ಮಗ ಹುಮಾಯೂನ್ ಪ್ರಾಚೀನ ಇಂದ್ರಪ್ರಸ್ಥ ನಗರವಿದ್ದ ಸ್ಥಳದಲ್ಲಿ ದಿನೇಪನಾಹ್ ಎಂಬ ಹೊಸ ನಗರವನ್ನು ಕಟ್ಟಿದ. ಇದು ಪೂರ್ಣವಾಗುವ ಮುನ್ನ ಆತ ಆಫ್ಘನ್ ಮುಂಖಡ ಷೇರ್‍ಶಾಹನಿಗೆ ಸೋಲಬೇಕಾಯಿತು. ಷೇರ್ ಶಾಹ ಅದನ್ನು ಪುನಃ ಕಟ್ಟಿದ. ಸುತ್ತಲೂ ಬಲವಾದ ಗೋಡೆ ಹಾಕಿಸಿದ. ಪುರಾತನ ಕಿಲಾದಲ್ಲಿ ಇಂದಿಗೂ ಈ ಗೋಡೆಯ ಭಗ್ನ ಅವಶೇಷಗಳನ್ನು ನೋಡಬಹುದು. ಅಕ್ಬರ್ ಮತ್ತು ಅವನ ಮಗ ಜಹಾಂಗೀರನ ಕಾಲದಲ್ಲಿ ಆಗ್ರ, ಲಾಹೋರ್, ರಾಜಧಾನಿಗಳಾಗಿದ್ದವು. ಅಕ್ಬರ್‍ನ ಮೊವ್ಮ್ಮಗ ಶಾಹಜಹಾನನಿಗೆ 1628ರಲ್ಲಿ ಆಗ್ರಾದಲ್ಲಿ ಪಟ್ಟಾಭಿಷೇಕವಾಯಿತು. ಅವನು 1638 - 58ರಲ್ಲಿ ಶಾಹಜಹಾನಾಬಾದ್ ಎಂಬ ನಗರ ಕಟ್ಟಿಸಿದ. ಇದು ಇಂದಿನ ಹಳೆ ದೆಹಲಿ ನಗರವಾಗಿ ಉಳಿದಿದೆ. 1739ರಲ್ಲಿ ನಗರ ನಾದಿರ್ ಶಾಹನ ಧಾಳಿಗೆ ತುತ್ತಾಯಿತು. 1771ರಲ್ಲಿ ಮರಾಠರು, 1804ರಲ್ಲಿ ಬ್ರಿಟಿಷರು ಈ ನಗರವನ್ನು ಮುತ್ತಿ ವಶಪಡಿಸಿಕೊಂಡರು. 1857ರ ಬಂಡಾಯದ ಕಾಲದಲ್ಲಿ ಬ್ರಿಟಿಷರು ಇಲ್ಲಿದ್ದ ಕೊನೆಯ ಮೊಗಲ್ ಚಕ್ರವರ್ತಿ 2ನೆಯ ಬಹುದ್ದೂರ್ ಶಾಹನನ್ನು ಸೆರೆಹಿಡಿದುರಂಗೂನಿಗೆ ಗಡಿಪಾರು ಮಾಡಿದರು. 1858ರಲ್ಲಿ ಬ್ರಿಟಿಷ್ ದೆಹಲಿಯಲ್ಲಿ ನಾಗರೀಕ ಆಡಳಿತಮ್ನ ಸ್ಥಾಪಿಸಿದರು. ಕಲ್ಕತ್ತ ಬ್ರಿಟಿಷ್ ಭಾರತದ ರಾಜಧಾನಿಯಾಗಿದ್ದರೂ ದೆಹಲಿಯ ಪ್ರಾಮುಖ್ಯ ಕಮ್ಮಿಯಾಗಲಿಲ್ಲ. 1877ರ ಜನವರಿ 1ರಂದು ವಿಕ್ಟೋರಿಯ ಮಹಾರಾಣಿಯನ್ನು ಭಾರತದ ಚಕ್ರವರ್ತಿನಿ ಎಂದು ಘೋಷಿಸಿದ್ದು ಈ ನಗರದಲ್ಲಿ. 1903ರ ಜನವರಿ ಯಲ್ಲಿ 7ನೆಯ ಎಡ್ವರ್ಡ್ ಕೊನೆಯ ದೊರೆಯ ದರ್ಬಾರ್ ಮತ್ತು 1911ರ ಡಿಸೆಂಬರಿನಲ್ಲಿ 5ನೆಯ ಜಾರ್ಜನ ಸಿಂಹಾಸನಾರೋಹಣ ಸಂಬಂಧವಾದ ಸಮಾರಂಭಗಳು ಇಲ್ಲಿ ನಡೆದುವು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ರೈಲುಗಳೂರಸ್ತೆಗಳೂ ನಿರ್ಮಾಣವಾಗಿ, ದೆಹಲಿ ಪ್ರಮುಖ ವ್ಯಾಪಾರ ಕೇಂದ್ರವೂ ಆಯಿತು.

	ಹೊಸ ದೆಹಲಿಯ ಇತಿಹಾಸ ಇತ್ತೀಚಿನದು. 1911ರ ಡಿಸೆಂಬರ್ 12ರಂದು 5ನೆಯ ಜಾರ್ಜ್ ದೊರೆಯ ಸಿಂಹಾಸನರೋಹಣ ಸಂದರ್ಭದಲ್ಲಿ ಘೋಷಿಸಿದಂತೆ ಭಾರತದ ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ವರ್ಗಾಯಿಸಲಾಯಿತು. ಸುವ್ಯವಸ್ಥಿತವಾದ ಹೊಸ ಜಿಲ್ಲೆಯನ್ನು ನಿರ್ಮಾಣವಾಯಿತು.

	1819ರಲ್ಲಿ ದೆಹಲಿ ಜಿಲ್ಲೆಯನ್ನು ನಿರ್ಮಿಸಲಾಯಿತು. ವಾಯುವ್ಯ ಪ್ರಾಂತ್ಯದ ಭಾಗವಾಗಿದ್ದ ದೆಹಲಿಯನ್ನು 1850 ಪಂಜಾಬ್ ಪ್ರಾಂತ್ಯಕ್ಕೆ ವರ್ಗಾಯಿಸಲಾತು. ಬ್ರಿಟಿಷ್ ಸರ್ಕಾರದ ರಾಜಧಾನಿಯಾಗಿದ್ದಾಗ ಅದೊಂದು ಪ್ರತ್ಯೇಕ ಪ್ರಾಂತ್ಯವಾಗಿ ಕೇಂದ್ರ ಸರ್ಕಾರದ ಅಧೀನಕ್ಕೆ ಬಂತು. ಚೀಫ್ ಕಮಿಷನರ್ ಮುಖ್ಯಾಧಿಕಾರಿಯಾದ. ಭಾರತ ಸ್ವಾತಂತ್ರ್ಯ ಪಡೆದ ಮೇಲೆ 1952ರಲ್ಲಿ ದೆಹಲಿ ಪ್ರದೇಶ ಸಿ ವಿಭಾಗದ ರಾಜ್ಯವಾಯಿತು. ರಾಜ್ಯ ಪುನರ್ವಿಂಗಡಣೆಯಾದ ಮೇಲೆ (1956) ಅದು ಕೇಂದ್ರ ಸರ್ಕಾರದ ಅಡಿಯಲ್ಲಿ ಒಕ್ಕೂಟ ಪ್ರದೇಶವಾಯಿತು.
										(ಬಿ.ಎಸ್.ಎ.)

	ಪುರಾತತ್ವ: ದೆಹಲಿಯಲ್ಲಿ ಅಸಂಖ್ಯಾತ ಪ್ರಾಚೀನ ಕಟ್ಟಡಗಳೂ ಪ್ರಾಕ್ತನ ವಸ್ತುವಿಶೇಷಗಳೂ ಉಂಟು. ಇದು ಇಂಡೊ-ಇಸ್ಲಾಮಿಕ್ ವಾಸ್ತು ಶಿಲ್ಪದ ನೆಲೆಗಳಲ್ಲೊಂದು. 1969 ಈಚೆಗೆ ಪುರಾತತ್ವ ಇಲಾಖೆ ದೆಹಲಿಯ ಪುರಾನಾ ಕಿಲಾದಲ್ಲಿ ನಡೆಸಿದ ಉತ್ಖನನಗಳಿಂದ ಮೊಗಲ್ ಪೂರ್ವದ ಅನೇಕ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ದೆಹಲಿಯ ಸಮೀಪದಲ್ಲಿ (ತಿಮರ್ ಪುರ) ವರ್ಣಚಿತ್ರಿತ ಬೂದುಬಣ್ಣದ ಮಡಕೆಗಳು ದೊರೆತಿವೆ. ಮಹಾಭಾರತದ ಕಾಲದಿಂದ ಹಿಡಿದು ಮೊಗಲ್ ಕಾಲದವರೆಗಿನ ವಾಸ್ತಿಶಿಲ್ಪೀಯ ಹಾಗೂ ಸಾಂಸ್ಕøತಿಕ ಮಜಲುಗಳನ್ನು ಇಲ್ಲಿ ಗುರುತಿಸಬಹುದು. ಮೌರ್ಯಕಾಲೀನ ಪದರದಲ್ಲಿ ಔತ್ತರೇಯ ಕಪ್ಪು ಹೊಳಪು ಮಡಕೆಗಳೂ ಆ ಕಾಲದ ಒಲೆಗಳೂ ಒಳಚರಂಡಿಯ ಭಾಗಗಳೂ ವೃತ್ತಾಕಾರವಾದ ಕಟ್ಟಡ ಇಲ್ಲವೆ ಬಾವಿಗಳೂ ಮಾತೃ ದೇವತೆಯುಳ್ಳ ವೃತ್ತಾಕಾರದ ಫಲಕಗಳೂ ಮಣ್ಣಿನ ಮೂರ್ತಿಗಳೂ ಶಿರಸ್ತ್ರಾಣ ಧರಿಸಿದ ಕುದುರೆ ಸವಾರನ ವಿಗ್ರಹಗಳೂ ಮಣ್ಣಿನ ಅನೇಕ ಮುದ್ರೆಗಳೂ ಮುದ್ರಿಕೆಗಳೂ ದೊರೆತಿವೆ. ಈ ಮುದ್ರಿಕೆಗಳ ಮೇಲೆ ಬ್ರಾಹ್ಮೀ ಲಿಪಿಯ ಬರೆಹಗಳಿವೆ. ಶುಂಗರ ಕಾಲದ ಸ್ತರದಲ್ಲಿ ಮಣ್ಣಿನ ಹಾಗೂ ಇಟ್ಟಿಗೆ ಕಟ್ಟಡಗಳ ಭಾಗಗಳು, ಕೊಂಬುಳ್ಳ ಹಾಗೂ ಮಾನವಾಕಾರದ ದೊಡ್ಡ ಮಡಕೆ ಯಕ್ಷ ಯಕ್ಷಿದೇವಿಯರ ಚಿತ್ರಗಳಿರುವ ಮಣ್ಣಿನ ಫಲಕಗಳು, ಪ್ರಾಣಿಗಳ ವಿಗ್ರಹಗಳು, ಮಣಿಗಳು ಅನೇಕ ಮುದ್ರೆಗಳು ಮತ್ತು ಮುದ್ರಿಕೆಗಳು ಸಿಕ್ಕಿವೆ. ಇವುಗಳ ಮೇಲೆ ಬ್ರಾಹ್ಮೀ ಲಿಪಿಯ ಬರೆಹಗಳಿವೆ. ಶಕಕುಶಾನ ಕಾಲೀನ ಪದರದಲ್ಲಿ ಸುಟ್ಟ ಇಟ್ಟಿಗೆಯಿಂದ ನಿರ್ಮಿಸಿದ್ದ ಕಟ್ಟಡ ಭಾಗಗಳು. ಮುದ್ರೆಯುಳ್ಳ ಮಡಕೆ ಚೂರುಗಳು, ಅಲಂಕಾರಿಕ ಟೋಪಿ ಧರಿಸಿದ ಮಾನವನ ಶಿರಸ್ಸಿನ ಶಿಲ್ಪ, ಆನೆಗಳ ಮೇಲೆ ಕುಳಿತ ಮಾವುತರ ಚಿತ್ರ, ದಂತದ ಹಿಡಿಕೆ ಹಾಗೂ ಕುಶಾನ ಮತ್ತು ಯೌಧೇಯರ ತಾಮ್ರದ ನಾಣ್ಯಗಳು ದೊರೆತಿವೆ. ಗುಪ್ತರ ಕಾಲದ ಸ್ತರದಲ್ಲಿ ಬ್ರಾಹ್ಮೀ (ಇದರ ಮೇಲೆ ಶ್ರೀವಿಕ್ರಮ ಎಂಬ ಹೆಸರಿದೆ), ಕೆಲವು ಮಣ್ಣಿನ ಮೂರ್ತಿಗಳು, ಚಿಪ್ಪಿನ ಬಳೆಚೂರುಗಳು, ಮಥುರಾ ಮರಳುಗಲ್ಲಿನಿಂದ ಕೆತ್ತಿದ ಮುಖಲಿಂಗದ ಭಾಗ, ವರ್ಣಚಿತ್ರವಿರುವ ಮಡಕೆಗಳು ಮತ್ತು ಶ್ರೀಮಕರಸ್ಯ, ಶ್ರೀ ಅಯ್ರ್ಯವಮ(?) ಇತ್ಯಾದಿ ಶಾಸನಗಳುಳ್ಳ ಮಣ್ಣಿನ ಮುದ್ರಿಕೆಗಳು ಸಿಕ್ಕಿವೆ. ಅನಂತರದ ಕಾಲದ ಪದರದಲ್ಲಿ ಪ್ರಣಾಳ ಮಾದರಿಯ ಕೊಂಬುಳ್ಳ ಮಡಕೆಗಳು, ಮಣ್ಣಿನ ಮೂರ್ತಿಗಳು ಮತ್ತು ಮಣಿಗಳು ದೊರೆತಿವೆ. ರಜಪೂತರ ಕಾಲದ ಸ್ತರದಲ್ಲಿ ಪ್ರಾಕಾರ ಇಲ್ಲವೆ ಕೋಟೆಯ ಭಾಗಗಳು, ಅಂಚುಳ್ಳ ಜಗ್ಗು, ಘುಂಘ್ರು ಮುಂತಾದ ತಾಮ್ರ ವಸ್ತುಗಳು, ಗಂಡಗಿನ ಬಟ್ಟಲು, ಕೆತ್ತನೆಯುಳ್ಳ ಶಿಲಾಫಲಕಗಳು, ವಿಷ್ಣುವಿನ ಶಿಲಾಮೂರ್ತಿ ಇತ್ಯಾದಿ ದೊರೆತಿವೆ. ದೆಹಲಿಯ ಸುಲ್ತಾನರ ಹಾಗೂ ಮೊಗಲ ಕಾಲಕ್ಕೆ ಸಂಬಂಧಿಸಿದ ಸ್ತರದಲ್ಲಿ ಹೊಳಪುಳ್ಳ ಪಾತ್ರೆ, ಪ್ರಾಣಿ ಹಾಗೂ ಮಾನವರ ಮಣ್ಣಿನ ಮೂರ್ತಿಗಳು, ಚೀನೀ ಪಿಂಗಾಣಿ ಪಾತ್ರೆ (ಮಿಂಗ್ ಕಾಲದ್ದು) ಮತ್ತು ಮಹಮ್ಮದ್-ಬಿನ್-ತುಗಲಕನ ನಾಣ್ಯಗಳು ಸಿಕ್ಕಿವೆ. ಇವಲ್ಲದೆ ವರ್ಣರಂಜಿತ ಹಂಚುಗಳು, ಸುಂದರ ಅಲಂಕಾರದ ಮಣ್ಣಿನ ಕಲಶಗಳು, ಕಾಗದದಷ್ಟು ತೆಳ್ಳಗಿನ ಉತ್ತಮ ದರ್ಜೆಯ ಬೂದು ಮಡಕೆಗಳು, ಹರಳಿನ ಸೀಸೆ, ಮಣ್ಣಿನ ದೀಪಸ್ತಂಭ, ಮತ್ತು ಬಂಗಾರದ ಹಾಗೂ ತಾಮ್ರದ ನಾಣ್ಯಗಳು ದೊರೆತಿವೆ. ಪುರಾತತ್ವ ಇಲಾಖೆಯ ವಾಯುವ್ಯ ವಲಯದವರು ಆಜûಮ್‍ಖಾನನ ಗೋರಿಯ ಬಳಿ ನಡೆಸಿದ ಭೂಶೋಧನೆಯಿಂದ ಮಧ್ಯ ಕಾಲೀನ ದೆಹಲಿಯರಕ್ಷಣಾವ್ಯವಸ್ಥೆಯ ಸ್ವರೂಪ ಗೊತ್ತಾಗಿದೆ. ಕಲ್ಲು ಮತ್ತು ಇಟ್ಟಿಗೆಗಳಿಂದ ಕಟ್ಟಿದ ಕೋಟೆ, ಅಲ್ಲಲ್ಲಿ ಅರ್ಧವೃತ್ತಾಕಾರದ ಗೋಪುರಗಳು ಕಂಡುಬಂದಿವೆ. ಇಲ್ಲಿ ಮಹಾಭಾರತ ಕಾಲದ ಕಪ್ಪುಗಣ್ಣದ ಚಿತ್ರಿತ ಮಡಕೆಗಳು ದೊರೆತಿವೆ. ಫಿರೋಜ್ ಶಾಹ ತುಗಲಕ್ (1351 - 55) ತಂದು ಹಾಕಿದ ಅಶೋಕನ ಸ್ತಂಭ ಶಾಸನಗಳೂ ಮೂಲತಃ ವಿಷ್ಣು ದೇವಾಲಯದ ಮುಂದೆ ಇದ್ದ ಸುಪ್ರಸಿದ್ಧವಾದ ಲೋಹಸ್ತಂಭವೂ ದೆಹಲಿಯಲ್ಲಿದೆ. ಈ ಲೋಹಸ್ತಂಭ ಚಂದ್ರರಾಜನ ಕಾಲದ್ದು. ಈಗ ಅದು ಕುತುಬ್ ಮಿನಾರ್ ಬಳಿ ಇದೆ. 10ನೆಯ ಶತಮಾನದಲ್ಲಿರಜಪೂತ ವಂಶದ ಸೂರಜ್‍ಪಾಲ ಕಟ್ಟಿಸಿದ ಸೂರ್ಯಕುಂಡದ ಅವಶೇಷಗಳು ದೊರಕಿವೆ. ಚೌಹಾಣ ವಂಶದ ಪೃಥ್ವೀರಾಜ 12ನೆಯ ಶತಮಾನದಲ್ಲಿ ರಾಯಪಿಢೌರಾ ಕೋಟೆಯನ್ನು ನಿರ್ಮಿಸದ. ಅದರ ಗೋಡೆ 30 ಅಡಿ ದಪ್ಪವಾಗಿಯೂ 60 ಅಡಿ ಎತ್ತರವಾಗಿಯೂ ಇತ್ತು. ಮುಸ್ಲಿಮರ ಆಗಮನದ ಅನಂತರ ಇವುಗಳಲ್ಲಿ ಕೆಲವುರೂಪಾಂತರಗಳು ಹೊಂದಿದುವು. ಇನ್ನು ಕೆಲವು ನಾಶವಾದುವು. ಇಂದು ದೆಹಲಿಯಲ್ಲಿರುವ ಹೆಚ್ಚಿನ ವಾಸ್ತುರಚನೆಗಳು ಮುಸ್ಲಿಮರ ಕಾಲಕ್ಕೆ ಸಂಬಂಧಿಸಿದವು. ಈ ನಗರ ಮುಸ್ಲಿಂ ವಾಸ್ತುಶಿಲ್ಪದ ನಿರೂಪಣೆಯಂತಿದೆ. ಮುಸ್ಲಿಂ ವಾಸ್ತು ಶೈಲಿಯ ಬೆಳವಣಿಗೆಯ ವಿವಿಧ ಹಂತಗಳನ್ನೂ ಹಲವು ಉಪಶೈಲಿಗಳನ್ನೂ ಇಲ್ಲಿ ಚೆನ್ನಾಗಿ ಗುರುತಿಸಬಹುದಲ್ಲದೆ ಶುದ್ಧ ಮುಸ್ಲಿಂ ಶೈಲಿಯನ್ನೂ ಹಿಂದೂ - ಮುಸ್ಲಿಂ ಸಮ್ಮಿಶ್ರ ಶೈಲಿಯನ್ನೂ ಕಾಣಬಹುದು.

	ದೆಹಲಿಯ ಮೊತ್ತಮೊದಲನೆಯ ಇಸ್ಲಾಮೀ ವಾಸ್ತುಕೃತಿ ಈವರೆಗೆ ತಿಳಿದಿರುವಂತೆ ಕುವ್ವತ್-ಉಲ್-ಇಸ್ಲಾಮ್ ಮಸೀದಿ. 1191 ಕುತ್ಬ್-ಉದ್-ದೀನ್ ಐಬಕ್ ಇದನ್ನು ನಿರ್ಮಿಸಿದ. ಇದರರಚನೆಯಲ್ಲಿ ಹಿಂದೂ ಕಲಾವಿದರ ಕೈವಾಡವಿದೆ. ಕಟ್ಟಡದ ಕೆಲವು ಭಾಗಗಳನ್ನು ಹಿಂದೂ ದೇವಾಲಯಗಳಿಂದ ತಂದು ಕಟ್ಟಿರಬಹುದು. ಹೀಗಾಗಿ ಇದು ಹಿಂದೂ ವಾಸ್ತುಕೃತಿಯಂತಿದೆ. ಇಲ್ತತ್‍ಮಿಷ್ ಆಳ್ವಿಕೆಯ ಅನಂತರ, ಅಲಾ-ಉದ್-ದೀನ್ ಖಲ್ಜಿ ಈ ಮಸೀದೆಯ ಸುತ್ತಲೂ ದೊಡ್ಡ ಪ್ರಾಕಾರವನ್ನು ಕಟ್ಟಿಸಿದ. ಇದರ ದಕ್ಷಿಣ ದ್ವಾರ ಮಾತ್ರ ಈಗ ಉಳಿದಿದೆ. ಇದೊಂದು ಸುಂದರವಾದ ವಾಸ್ತುವಿನ್ಯಾಸ. ಇದರಲ್ಲಿ ಶುದ್ಧ ಮುಸ್ಲಿಂ ಕಮಾನುಗಳಿವೆ. 

	ಕುತುಬ್ ಮಿನಾರ್ ದೆಹಲಿಯಲ್ಲೆ ಎದ್ದು ಕಾಣುವ ವಾಸ್ತುಕೃತಿ. 234 ಅಡಿ ಎತ್ತರವೂ 376 ಒಳಮೆಟ್ಟಿಲುಗಳೂ ಇರುವ ಈ ಮಿನಾರ್‍ನ್ನು ಕುತ್ಬ್-ಉದ್-ದೀನ್ ಐಬಕ್ ಕಟ್ಟಿಸಲಾರಂಭಿಸಿದ (1199). ಇದನ್ನು ಪೂರ್ಣಗೊಳಿಸಿದ್ದು ಅನಂತರ ಬಂದ ಇಲ್ತತ್ ಮಿಷನ ಕಾಲದಲ್ಲಿ. ಕುತುಬ್ ಮಿನಾರ್ ಅನೇಕ ಉಪಶೈಲಿಗಳಿಂದ ಕೂಡಿದ ಕಟ್ಟಡ. ಇದರ ಕೆಳಭಾಗವನ್ನು ಕೆಂಪು ಹಳದಿ ಮರಳುಗಲ್ಲಿನಿಂದ ಕಟ್ಟಲಾಗಿದ್ದು ಇದು ದುಂಡನೆಯ ಲಂಬಪಟ್ಟಿಕೆಗಳಿಂದ ಕೂಡಿದೆ. ಮೇಲ್ಭಾಗವನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಇದು ಕೋನಾಕೃತಿಯ ಲಂಬಪಟ್ಟಿಕೆಗಳನ್ನೊಳಗೊಂಡಿದೆ. ಕೆಳಭಾಗದಲ್ಲಿ ಕುರಾನಿನಿಂದ ಆಯ್ದ ಕೆಲವು ವಾಕ್ಯಗಳನ್ನು ಅತ್ಯಂತ ಆಲಂಕಾರಿಕವಾಗಿ ಕೆತ್ತಲಾಗಿದೆ. ಕುತುಬ್ ಮಿನಾರಿನ ಅಕ್ಕಪಕ್ಕಗಳಲ್ಲಿರುವ ಇತರ ಕಟ್ಟಡಗಳ ಪೈಕಿ ಇಲ್ತತ್‍ಮಿಷ್ ಗೋರಿ, ಜಮಾ ಮಸೀದಿ, ಅಷ್ಟಕೋನಾಕಾರದ ಅಧಾಂಖಾನನ ಗೋರಿ ಮುಖ್ಯವಾದವು. ಈ ಪ್ರದೇಶದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ತುಗಲಕಾಬಾದಿನಲ್ಲಿ ಕೆಲವು ಪ್ರಮುಖ ವಾಸ್ತುಶಿಲ್ಪಗಳುಂಟು. ಭಗ್ನವಾದ ಕೋಟೆಕೊತ್ತಲ ಮತ್ತು ಅರಮನೆಗಳು ಘಿಯಾಸುದ್ದೀನನ ಕಾಲದವು. ಇವನ್ನು ಎತ್ತರವಾದ ದಿನ್ನೆಯ ಮೇಲೆ ಕಟ್ಟಲಾಗಿತ್ತು. ಘಿಯಾಸುದ್ದೀನನ ಗೋರಿ ಮರಳುಕಲ್ಲು ಹಾಗೂ ಕಪ್ಪು ಹಳದಿ ಅಮೃತಶಿಲೆಯಲ್ಲಿ ಕಟ್ಟಿದ ಭದ್ರವಾದ ಕಟ್ಟಡ. ಇದರ ತುದಿಯಲ್ಲಿರುವ ಸುಂದರವಾದ ಗುಮ್ಮಟ ಸಂಪೂರ್ಣವಾಗಿ ಅಮೃತಶಿಲೆಯಲ್ಲಿ ನಿರ್ಮಿತವಾದ್ದು. ದೆಹಲಿಯ ಜಹಾನ್ ಪನಾಹ್ ಪ್ರದೇಶದಲ್ಲಿರುವ ವಾಸ್ತು ಕೃತಿಗಳಲ್ಲಿ ಬಿಜಯ್ ಮಂಡಲ (ಬಾದಲ್ ಮಂಡಲ) ಹಾಗೂ ಬೇಗಮ್‍ಪುರ ಮಸೀದಿ ಪ್ರಮುಖವಾದವು. ಕುತುಬ್ ಮಿನಾರಿನ ಉತ್ತರಕ್ಕಿರುವ ಹುವಜ್ ಖಾಸ್‍ನಲ್ಲಿ ಮೊಗಲ್ ಕಾಲೇಜು ಫಿರೂಜûನ ಗೋರಿ ಇವೆ. ಸರಳಗಂಭೀರವಾದ ಈ ವಾಸ್ತುರಚನೆಗಳಲ್ಲಿ ಅಲಂಕರಣೆಗಳೇ ಇಲ್ಲ. ಈಗ ಫಿರೋಜ್ ಶಾಹ ಕೋಟ್ಲಾ ಎಂದು ಕರೆಯಲಾಗುವ ಫಿರೋಜಾಬಾದಿನಲ್ಲಿ ಕೋಟೆಕೊತ್ತಲಗಳ ಅವಶೇಷಗಳುಂಟು. ಅನೇಕ ಹಂತಗಳ ಮೇಲುಗಡೆ ಈಗ ಅಶೋಕನ ಶಿಲಾ ಸ್ತಂಭ ಶಾಸನವನ್ನು ನೆಡಲಾಗಿದೆ. ಭಗ್ನವಾದ ಜಮಾ ಮಸೀದಿ. ಕಲನ್ ಮಸೀದಿ ಇವು ತುಗಲಕ್ ಶೈಲಿಯವು. ಇದರಲ್ಲಿ ಚೂಪಾದ ಮಿನಾರುಗಳನ್ನೂ ಗುಮ್ಮಟಗಳನ್ನೂ ಮುಖ್ಯವಾಗಿ ಗಮನಿಸಬೇಕು. ಹೊಸ ದೆಹಲಿಯ ದಕ್ಷಿಣಕ್ಕೆ ಸಯ್ಯದ್ ಮತ್ತು ಲೋದಿ ವಂಶದ ಸಮಾಧಿಗಳೂ ಇತರ ವಾಸ್ತುರಚನೆಗಳೂ ಕಂಡುಬರುತ್ತವೆ. ಅವುಗಳಲ್ಲಿ ಭಾರತೀಯ - ಇಸ್ಲಾಮೀ ಸಂಮಿಶ್ರ ಶೈಲಿ ಎದ್ದು ಕಾಣುತ್ತದೆ. ಅವುಗಳ ಪೈಕಿ ಮುಬಾರಕ್ ಶಾಹ ಸೈಯದ್ ಗೋರಿ, ತೀನ್ ಬುರ್ಜ್ ಇವು ಪ್ರಮುಖವಾದವು. 1501ರಲ್ಲಿ ಕಟ್ಟಿದ ಶೀಸ್ ಗುಂಬeóï ಎಂಬ (ಶಿಹಾಬ್-ಉನ್-ದೀನ್ ತಾಜ್ ಖಾನನ ಗೋರಿ) ಆಕರ್ಷಕವಾದ್ದು. ಇದಕ್ಕೆ ಬಾರಾ ಗುಂಬeóï ಎಂದೂ ಹೆಸರುಂಟು. ಇದರ ಸಮೀಪದಲ್ಲಿರುವ ಮತ್ತೊಂದು ಮಸೀದಿಯಲ್ಲಿ ಆ ಕಾಲದ ಗಾರೆ ಕೆಲಸವೂ ಅನೇಕ ಲತಾ ಪುಷ್ಪವಿನ್ಯಾಸಗಳೂ ಅರಬೀ ಶಾಸನಗಳೂ ಉಳಿದಿವೆ. ಸಮೀಪದಲ್ಲಿ ಸಿಕಂದರ್ ಲೋದಿಯ ಗೋರಿಯಿದೆ. ಚೌರಸಾಕಾರದ ಪ್ರಾಕಾರದೊಳಗಿರುವ ಈ ಸಮಾಧಿ ಕಟ್ಟಡವನ್ನು ಎತ್ತರವಾದ ಜಗತಿಯ ಮೇಲೆ ಕಟ್ಟಲಾಗಿದೆ. ಲೋದಿ ವಾಸ್ತುಕೃತಿಗಳ ಪೈಕಿ ಸಿಕಂದರ್ ಲೋದಿಯ ಮಂತ್ರಿ ಕಟ್ಟಿಸಿದ ಮೋತ್ - ಕಿ - ಮಸೀದಿ ಅತ್ಯಂತ ದೊಡ್ಡದು. ರೇಖಾಸಾಮರಸ್ಯ, ವರ್ಣಸಂಯೋಜನೆ, ಬೆಳಕು ನೆಳಲುಗಳ ಚೆಲ್ಲಾಟ ಮುಂತಾದವುಗಳಿಂದಾಗಿ ಇದು ಅತ್ಯಂತ ಆಕರ್ಷಕವಾಗಿದೆ.

	ಶೇರ್ ಷಾಹ ನಿರ್ಮಿಸಿದ ಕೋಟೆ ಪುರಾನಾ ಕಿಲಾ ಎಂಬ ಹೆಸರಿನಿಂದ ಖ್ಯಾತಿ ಪಡೆದಿದೆ. ನವದೆಹಲಿಯ ಪೂರ್ವಕ್ಕಿರುವ ಈ ಕೋಟೆಯ ಗೋಡೆ ಮಾತ್ರ ಹಾಗೆಯೇ ಉಳಿದಿದೆ. ಕೋಟೆಯ ಮೂರು ದ್ವಾರಗಳ ಪೈಕಿ ಉತ್ತರ ದ್ವಾರದ ಅಮೃತಶಿಲಾಪಟ್ಟಿಕೆಯ ಮೇಲೆ ಸಿಂಹದ ಬೇಟೆಯಾಡುತ್ತಿರುವ ರಾಜನ ಚಿತ್ರ ಕೆತ್ತಲಾಗಿದೆ. ಮುಸ್ಲಿಂ ವಾಸ್ತು ಕಟ್ಟಡವೊಂದರಲ್ಲಿ ವ್ಯಕ್ತಿಚಿತ್ರವಿರುವ ಒಂದು ಅಪೂರ್ವ ನಿದರ್ಶನವಿದು. ಇದು ಶೇರ್ ಷಾಹನ ಜೀವನದಲ್ಲಿ ನಡೆದ ಒಂದು ಮುಖ್ಯ ಘಟನೆಯನ್ನು ನಿರೂಪಿಸಬಹುದು. ಕಿಲಾ-ಇ-ಕುಹ್ನಾ ಮಸೀದಿ (ಶೇರ್ ಶಾಹನ ಸಮಾಧಿ) ಭಾರತ - ಆಫ್ಘನ್ ವಾಸ್ತುಶೈಲಿಯಲ್ಲಿ ಅತ್ಯಂತ ಪ್ರಮುಖವಾದ್ದು. ಇದು ತೀರ ದೊಡ್ಡದಾಗಿಲ್ಲದಿದ್ದರೂ ಪ್ರಮಾಣಬದ್ಧವಾಗಿದೆ. ದ್ವಾರದರಚನೆ, ಅಲಂಕರಣಗಳೆಲ್ಲ ಆಕರ್ಷಕವಾಗಿವೆ. 

	ದೆಹಲಿಯ ನಿeóÁಮ್-ಉದ್-ದೀನನ ಗುಡಿ ತುಗಲಕ್ ಕಾಲದ ಇನ್ನೊಂದು ಧಾರ್ಮಿಕ ವಾಸ್ತು ಕೃತಿ. ಬಿಜಾóಂಟಿನ್ ಶೈಲಿಯ ಗುಮ್ಮಟ ಮತ್ತು ಜಾಲಂಧ್ರಗಳನ್ನೊಳಗೊಂಡ ಸುಂದರವಾದ ಕಮಾನುಗಳು ಆಕರ್ಷಕವಾಗಿವೆ. ಇದರ ಬಳಿ ಶಾಹಜಹಾನನ ಮಗಳು ಜಹಾನಾರಾಳ ಹಾಗೂ ಮಹಮ್ಮದ್ ಶಾಹನ ಆಸ್ಥಾನ ಕವಿಯಾಗಿದ್ದ ಅಮಿರ್ ಖುಸ್ರುವಿನ ಸಮಾಧಿಗಳಿವೆ. 	ಹುಮಾಯೂನನ ಗೋರಿ, ಕೆಂಪು ಕೋಟೆ ಹಾಗೂ ಜಮಾ ಮಸೀದಿ ಇವು ಮೊಗಲರ ಉತ್ತಮ ವಾಸ್ತು ಕೃತಿಗಳು, ಯುಮಾಯೂನನ ಗೋರಿ ನೋಡಲು ಸರಳವಾದ ಕಟ್ಟಡವಾದರೂ ಶಕ್ತಿಯುತ ಸೌಂದರ್ಯದಿಂದ ಕೂಡಿದ ಕಟ್ಟಡ, 1565ರಲ್ಲಿ ಪೂರ್ತಿಯಾದ ಇದನ್ನು ಹುಮಾಯೂನನ ರಾಣಿಯಾದ ಹಾಜಿ ಬೇಗಂ ಕಟ್ಟಿಸಿದಳು. ವಿಶಾಲವಾದ ಮೊಗಲ್ ಉದ್ಯಾನದ ಮಧ್ಯದಲ್ಲಿರುವ ಈ ಗೋರಿಯಲ್ಲಿ ಮನೋಹರವಾದ ಕಮಾನುಗಳಿವೆ. ಇದರ ತಳಪಾಯ ಚೌರಸವಾದರೂ ಮೇಲ್ಭಾಗ ಅಷ್ಟಕೋನಾಕಾರ. ಮೊಗಲ್ ವಾಸ್ತುವಿನ ಆರಂಭಾವಸ್ಥೆಯನ್ನು ಸೂಚಿಸುವ ಈ ಕಟ್ಟಡ ಒಟ್ಟಾರೆ ಆಕರ್ಷಕವಾಗಿಯೂ ವಾಸ್ತುಶಿಲ್ಪ ದೃಷ್ಟಿಯಿಂದ ಸಾಮರಸ್ಯಪೂರ್ಣವಾಗಿಯೂ ಇದೆ. ಕೆಂಪುಮರಳುಕಲ್ಲು ಮತ್ತು ಬಿಳಿಕಪ್ಪು ಹಳದಿ ಅಮೃತಶಿಲೆಗಳ ಪ್ರಮಾಣಬದ್ಧವಾದ ಉಪಯೋಗದಿಂದಾಗಿ ವರ್ಣಸಂಯೋಜನೆಯ ವಿಶೇಷ ಸೊಬಗೂ ಕಂಡುಬರುತ್ತದೆ; ಬೆಳಕು ನೆಳಲಿನ ಚೆಲ್ಲಾಟಕ್ಕೂ ಅವಕಾಶವಿದೆ. ಗೋರಿಯ ಗುಮ್ಮಟ ವಿಶಿಷ್ಟವಾದ ಪರ್ಷಿಯನ್-ಮೊಗಲ್ ಶೈಲಿಯದು. ನೀಲಿ ಹಂಚಿನಿಂದ ಅಲಂಕರಿಸಿದ ನೀಲಗುಂಬಜ್ó ಈ ಗೋರಿಯ ಬಳಿಯಿದೆ.

	ಮೊಗಲರ ಘನವೈಭವಕ್ಕೆ ಮೂಕಸಾಕ್ಷಿಯಂತಿರುವ ಕೆಂಪು ಕೋಟೆ ಹಾಗೂ ಅರಮನೆ ಕೆಂಪು ಮರಳುಗಲ್ಲಿನ ಅದ್ಭುತ ಕಟ್ಟಡ. 1639ರಲ್ಲಿ ಇದರ ನಿರ್ಮಾಣ ಆರಂಭವಾಗಿ ಸುಮಾರು 9 ವರ್ಷಗಳಲ್ಲಿ ಇದು ಪೂರೈಸಿತು. 1648ರಲ್ಲಿ ಶಾಹಜಹಾನ್ ಈ ಕೋಟೆಯನ್ನು ಪ್ರವೇಶಿಸಿದ. ಇದು ಅನೇಕ ಸುಂದರ ಕಮಾನುಗಳನ್ನು, ತಂಪಾದ ನೀರಿನ ಕೊಳಾಯಿ ಮತ್ತು ಒಳ ಅಲಂಕರಣೆ ಕೈಸಾಲೆಗಳನ್ನು ಒಳಗೊಂಡಿವೆ. ಕೆಂಪು ಕೋಟೆಯ ಎರಡು ದ್ವಾರಗಳು ಮೊಗಲ್ ವಾಸ್ತುಶಿಲ್ಪ ಸೌಂದರ್ಯಕ್ಕೆ ಉತ್ತಮ ನಿದರ್ಶನಗಳು. ಚಾಂದ್ನಿ ಚೌಕ ಎಂಬ ಖ್ಯಾತ ಮಾರುಕಟ್ಟೆಯ ಎದುರಿಗೆ ಇರುವ ದ್ವಾರಕ್ಕೆ ಲಾಹೋರ್ ದ್ವಾರ ಎಂದು ಹೆಸರು. ಕೆಂಪು ಕೋಟೆಯ ಒಳಭಾಗದಲ್ಲಿ ನಖರ್ ಖಾನಾ, ದಿವಾನ್-ಇ-ಆಮ್. ದಿವಾನ್-ಇ-ಖಾಸ್, ಮೋತಿ ಮಸೀದಿ, ಹಮಾಮ್ ಮುಂತಾದ ಆಕರ್ಷಕ ಕಟ್ಟಡಗಳಿವೆ. ದಿವಾನ್-ಇ-ಆಮ್‍ನಲ್ಲಿರುವ ಸಿಂಹಾಸನದ ಪೀಠಭಾಗದಲ್ಲಿ ಗಟ್ಟಿಕಲ್ಲಿನಲ್ಲಿ ಲತೆ, ಪಕ್ಷಿ ಮತ್ತು ಪುಷ್ಪಗಳನ್ನು ಸೂಕ್ಷ್ಮವಾಗಿ ಕೆತ್ತಿ ಹುದುಗಿಸಲಾಗಿದೆ. ಪಶುಪಕ್ಷಿಗಳ ಮಧ್ಯದಲ್ಲಿ ಕುಳಿತು ತಂಬೂರಿಯನ್ನು ಬಾರಿಸುತ್ತಿರುವ ಅಫ್ರ್ಯೂಸನ ಚಿತ್ರ ಕುತೂಹಲಕಾರಿಯಾದು. ಫ್ಲಾರೆಂಟೈನ್ ಶೈಲಿಯಲ್ಲಿರುವ ಈ ಚಿತ್ರಫಲಕಗಳು ಇಟಲಿ ದೇಶದಿಂದ ಆಮದಾಗಿರಬೇಕು. ದಿವಾನ್-ಇ-ಆಮ್‍ನ ಹಿಂಭಾಗದಲ್ಲಿರುವರಂಗಮಹಲಿನ ತುಂಬ ವರ್ಣರಂಜಿತ ಅಲಂಕರಣೆಗಳಿದ್ದವು. ಅಂತಃಪುರದ ಸ್ತೀಯರಿಗಾಗಿ ನಿರ್ಮಿಸಿದ್ದ ಈ ಮಹಲಿನಲ್ಲಿರುವ ನಹರ್-ಇ-ಬಿಹಿಷ್ತ್ ಎಂಬ ಕಾಲುವೆ ತಂಪಾದ ನೀರಿನಿಂದ ತುಂಬಿತ್ತು. ಇದರ ದಕ್ಷಿಣಕ್ಕೆ ಮಮ್ತಾಜ್ó ಮಹಲ್ ಅಥವಾ ಶೀಷ್ ಮಹಲ್ ಇದೆ. ಈಗ ಅದು ಪುರಾತತ್ತ್ವ ವಸ್ತು ಸಂಗ್ರಹಾಲಯವಾಗಿದೆ. ಮೊಗಲರ ಕಾಲದ ವರ್ಣಚಿತ್ರಗಳೂ ಒಡವೆ ವಸ್ತುಗಳೂ ಆಯಧೋಪಕರಣಗಳೂ ಇದರಲ್ಲಿವೆ. 

	ರಂಗ್ ಮಹಲಿನ ಉತ್ತರಕ್ಕಿರುವ ಮಹಲ್-ಇ-ಖಾಸ್ ಎಂಬ ಕಟ್ಟಡದ ತುಂಬ ಗಟ್ಟಿಕಲ್ಲಿನ ಸೂಕ್ಷ್ಮ ಹುದುಗುಚಿತ್ರಗಳಿವೆ. ಚಾವಣಿಯನ್ನು ವರ್ಣಚಿತ್ರಗಳಿಂದ ಅಲಂಕರಿಸಲಾಗಿತ್ತು. ಇದರಲ್ಲಿರುವ ಜಾಲಾಂದ್ರಗಳು ಕಸೂತಿ ಕೆಲಸಕ್ಕಿಂತ ಸೂಕ್ಷ್ಮವಾದ ಕೆತ್ತನೆ ಕೆಲಸಗಳಿಂದ ಅಲಂಕೃತವಾಗಿದೆ. ಇದರ ಮೇಲ್ಭಾಗದಲ್ಲಿ ನ್ಯಾಯದ ತಕ್ಕಡಿಯ ಚಿತ್ರವಿದೆ. ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವುದು ಮುಥಮ್ಮಾನ್ ಬುರ್ಜ್. ಉಪ್ಪರಿಗೆಯುಳ್ಳ ಈ ಕಟ್ಟಡವನ್ನು ಇಮ್ಮಡಿ ಅಕ್ಬರ್ ಶಾಹ ಸೇರಿಸಿದ. ಉತ್ತರಕ್ಕೆ ದಿವಾನ್-ಇ-ಖಾಸ್ ಇದೆ. ಇದರಲ್ಲಿ ಜಗತ್ಪ್ರಸಿದ್ಧವಾದರತ್ನಖಚಿತ ಮಯೂರ ಸಿಂಹಾಸನವಿತ್ತು. ಇದನ್ನೊಳಗೊಂಡ ಒಟ್ಟು ವಾಸ್ತುರಚನೆ ಮೊಗಲರ ವಾಸ್ತು ವೈಭವಕ್ಕೆ ಹಿಡಿದ ಕನ್ನಡಿಯಂತಿತ್ತು. ವರ್ಣಚಿತ್ರಗಳೂ ಹುದುಗು ಚಿತ್ರ ಕೆಲಸಗಳೂ ಇರುವ ಈ ಕಟ್ಟಡ ಅತ್ಯಂತ ಮನೋಹರವಾದ್ದು. 

ಕೆಂಪು ಕೋಟೆಯಲ್ಲಿರುವ ಮೋತಿ ಮಸೀದಿಯನ್ನು ಔರಂಗ್‍ಜೇóಬ್ ತನ್ನ ಸ್ವಂತ ಉಪಯೋಗಕ್ಕಾಗಿ ಕಟ್ಟಿಸಿದ. ಸಂಪೂರ್ಣವಾಗಿ ಅಮೃತಶಿಲೆಯಲ್ಲಿ ನಿರ್ಮಿಸಲಾದ ಈ ಕಟ್ಟಡ, ಅತಿಯಾದ ಅಲಂಕರಣಗಳಿಂದಾಗಿ, ಮೊಗಲ್ ವಾಸ್ತು ಶೈಲಿಯ ನೈಜ ಸೌಂದರ್ಯವನ್ನು ಕಳೆದುಕೊಂಡಿದೆ.

ಕೆಂಪು ಕೋಟೆಯ ಎದುರಿಗೆ ಶೋಭಿಸುವ ಇನ್ನೊಂದು ಭವ್ಯ ವಾಸ್ತುರಚನೆಯೆಂದರೆ ಜಮಾ ಮಸೀದಿ, ಎತ್ತರವಾದ ಜಗತಿಯ ಮೇಲೆ ಕಟ್ಟಲಾದ ಈ ಮಸೀದಿಯಲ್ಲಿ ಅನೇಕ ಸುಂದರ ಕಮಾನುಗಳೂ ದ್ವಾರಗಳೂ ಗುಮ್ಮಟಗಳೂ ಎತ್ತರವಾದ ಮಿನಾರುಗಳೂ ಇವೆ. ಇದರ ನಿರ್ಮಾಣಕಾರ್ಯ ಆರಂಭವಾದ್ದು 1650ರಲ್ಲಿ. ಇದನ್ನು ಮುಗಿಸಲು 6 ವರ್ಷಗಳ ಕಾಲ ಹಿಡಿಯಿತು. ಇದರ ಭವ್ಯವಾದ ಗುಮ್ಮಟ ಕಪ್ಪು ಮತ್ತು ಬಿಳಿ ಅಮೃತಶಿಲೆಯ ಪಟ್ಟಿಕೆಗಳಿಂದ ಕೂಡಿ ಆಕರ್ಷಕವಾಗಿದೆ. 325 ಚದರ ಅಡಿಗಳ ಅಂಗಳ ಹೊಂದಿದೆ ಈ ಮಸೀದಿಯ ಪ್ರಾರ್ಥನಾಮಂದಿರದ ಉದ್ದ 201 ಅಡಿ, ಅಗಲ 120 ಅಡಿ. ಮನೋಹರವಾದ ಈ ಕಟ್ಟಡಕ್ಕೆ ಮೂರು ದ್ವಾರಗಳೂ ನಾಲ್ಕು ಶಿಖರಗಳೂ ಸೇರಿವೆ. ಈ ಮಸೀದಿಗೆ ಹೊಂದಿಕೊಂಡಂತೆ ಫತೆಪುರಿ ಮಸೀದಿ (1650) ಜೀನತ್ ಮಸೀದಿ (1700) ಹಾಗೂ ಚೋಟಿ ಸೋನೆ ಮಸೀದಿಗಳಿವೆ. 

ದೆಹಲಿಯ ಮೊಗಲ್ ವಾಸ್ತುಕೃತಿಗಳಲ್ಲಿ ಸಫ್ದರ್ ಜಂಗ್ ಗೋರಿ ಕಟ್ಟಕಡೆಯದು. ವಿಶಾಲವಾದ ಅಂಗಳದಲ್ಲಿರುವ ಈ ಕಟ್ಟಡ ಹುಮಾಯೂನನ ಗೋರಿಯಷ್ಟೇ ಭವ್ಯವೂ ಸುಂದರವೂ ಆಗಿದೆ.

1857ರಲ್ಲಿ ಬಂಡಾಯಕ್ಕೆ ಸಂಬಂಧಿಸಿದಂತೆ ಕೆಂಪು ಮರಳುಗಲ್ಲಿನ ಒಂದು ಸ್ಮಾರಕ ಕಟ್ಟಡವನ್ನು 19ನೆಯ ಶತಮಾನದ ಗಾತಿಕ್ ಶೈಲಿಯಲ್ಲಿರಚಿಸಲಾಗಿದೆ. 1725ರಲ್ಲಿ ಜಯಪುರದ ಮಹಾರಾಜ ಇಮ್ಮಡಿ ಜಯಸಿಂಹ ಕಟ್ಟಿಸಿದ ಜಂತರ್ - ಮಂತರ್ ಎಂಬ ಕಟ್ಟಡಗಳ ಗುಂಪು ಗುಂಪು ಪಾರ್ಲಿಮೆಂಟ್‍ರಸ್ತೆಯಲ್ಲಿದೆ. 

ನವದೆಹಲಿಯಲ್ಲಿರುವ ಪಾರ್ಲಿಮೆಂಟ್ ಭವನ, ರಾಷ್ಟ್ರಪತಿ ಭವನ, ಸೆಕ್ರೆಟೆರಿಯಟ್ ಮುಂತಾದ ಆಕರ್ಷಕ ಭವನಗಳನ್ನು ಬ್ರಿಟಿಷ್ ಆಡಳಿತದ ಕಾಲದಲ್ಲಿ ಎಡ್ವಿನ್ ಲೂಟಿನ್ಸ್ ಮತ್ತು ಹರ್ಬಟ್ ಬೇಕರ್ ಎಂಬ ಖ್ಯಾತ ಶಿಲ್ಪಿಗಳು ನಿರ್ಮಿಸಿದರು. ಇವುಗಳಲ್ಲಿ ಬೌದ್ಧ ವಾಸ್ತು ಶೈಲಿಯ ಚೈತ್ಯ, ಸ್ತೂಪ ಮುಂತಾದವೂ ಪಾಶ್ಚಾತ್ಯ ವಾಸ್ತುಶೈಲಿಯ ಕೆಲವು ವಿನ್ಯಾಸಗಳೂ ಸಮ್ಮಿಶ್ರವಾಗಿದ್ದು ಇವು ಉಪಯುಕ್ತತೆಯ ದೃಷ್ಟಿಯಿಂದ ನಿರ್ಮಿತವಾಗಿವೆ. ಪಾಶ್ಚಾತ್ಯ ಹಾಗೂ ಭಾರತೀಯ ಶೈಲಿಗಳ ಹಿತಮಿತವಾದ ಮೇಳಕ್ಕೆ ಉದಾಹರಣೆಯಾಗಿ ಸರ್ವೋಚ್ಛ ನ್ಯಾಯಾಲಯದ ಕಟ್ಟಡ ಹಾಗೂ ವಿಜ್ಞಾನ ಭವನಗಳನ್ನು ಗಮನಿಸಬಹುದು. ಬಾಲ ಭವನ, ರಾಷ್ಟ್ರೀಯ ವಸ್ತುಸಂಗ್ರಹಾಲಯ,ರವೀಂದ್ರ ಭವನ ಮುಂತಾದವುಗಳಲ್ಲಿ ನವ್ಯಶೈಲಿಯ ಛಾಯೆ ಮೂಡಿದೆ.

ಯಮುನಾ ನದೀ ತೀರದಲ್ಲಿರುವ ಗಾಂಧೀ ನೆಹರು ಬಹಾದುರ್ ಶಾಸ್ತ್ರಿ ಸ್ಮಾರಕ ಕಟ್ಟಡಗಳೂ ಆಧುನಿಕ ವಾಸ್ತುಶಿಲ್ಪದ ದೃಷ್ಟಿಯಿಂದ ಗಮನಾರ್ಹ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯದ ವೇಳೆಗೆ ಕಟ್ಟಲಾದ ಲಕ್ಷ್ಮೀನಾರಾಯಣ ಮಂದಿರ ನಾಗರ ಶೈಲಿಯಲ್ಲಿದೆ. ಇದು ಅನೇಕ ಪೌರಾಣಿಕ ವರ್ಣಚಿತ್ರ ಕಥಾನಕಗಳಿಂದಲೂ ಸಂಸ್ಕøತ ಸೂಕ್ತಿಗಳಿಂದಲೂ ಅಲಂಕೃತವಾಗಿವೆ.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ